ADVERTISEMENT

ಉಪನಗರ ರೈಲು ಯೋಜನೆ ವಿಳಂಬಕ್ಕೆ ಅಸಮಾಧಾನ

ನೈರುತ್ಯ ರೈಲ್ವೆ ವಿಭಾಗದ ಹಲವು ಸಮಸ್ಯೆಗಳ ಚರ್ಚೆ ನಡೆಸಿದ ಸಂಸದರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 18:38 IST
Last Updated 18 ಸೆಪ್ಟೆಂಬರ್ 2018, 18:38 IST
ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಂಸದರ ಸಭೆಗೆ ಬಂದ ಹಿಂದೂಪುರ ಸಂಸದ ನಿಮ್ಮಲ ಕೃಷ್ಣಪ್ಪ ಹಾಗೂ ಪಿ.ಸಿ.ಮೋಹನ್‌ ಅವರನ್ನು ನೈಋತ್ಯ ರೈಲ್ವೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಸ್‌. ಸಕ್ಸೇನಾ ಸ್ವಾಗತಿಸಿದರು. ರಾಜ್ಯಸಭಾ ಸದಸ್ಯ ಚಂದ್ರಶೇಖರ್‌, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಇದ್ದಾರೆ
ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಂಸದರ ಸಭೆಗೆ ಬಂದ ಹಿಂದೂಪುರ ಸಂಸದ ನಿಮ್ಮಲ ಕೃಷ್ಣಪ್ಪ ಹಾಗೂ ಪಿ.ಸಿ.ಮೋಹನ್‌ ಅವರನ್ನು ನೈಋತ್ಯ ರೈಲ್ವೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಆರ್‌.ಎಸ್‌. ಸಕ್ಸೇನಾ ಸ್ವಾಗತಿಸಿದರು. ರಾಜ್ಯಸಭಾ ಸದಸ್ಯ ಚಂದ್ರಶೇಖರ್‌, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ ಇದ್ದಾರೆ   

ಬೆಂಗಳೂರು: ಉಪನಗರ ರೈಲು ಯೋಜನೆ ಅನುಷ್ಠಾನ ವಿಳಂಬಕ್ಕೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಕಾರಣ ಎಂದು ಸಂಸದರು ತೀವ್ರ ತರಾಟೆಗೆ ತೆಗೆದುಕೊಂಡರು.

ನೈರುತ್ಯ ರೈಲ್ವೆ ವಿಭಾಗದ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳ ಕುರಿತು ನಗರದ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ ಮಂಗಳವಾರ ನಡೆದ ಸಂಸದರ ಸಭೆಯಲ್ಲಿ ಈ ಅಸಮಾಧಾನ ವ್ಯಕ್ತವಾಯಿತು. ಉಪನಗರ ರೈಲು ಹಾಗೂ ನಗರದಿಂದ ಕಡಿಮೆ ಅಂತರದ ಪ್ರದೇಶಗಳಿಗೆ ರೈಲು ಓಡಿಸುವುದು ಚರ್ಚೆಯ ಪ್ರಧಾನ ವಸ್ತುವಾಯಿತು.

ನಗರ ವ್ಯಾಪ್ತಿಯಲ್ಲಿ ಇನ್ನೂ ಬಾಕಿ ಇರುವ ಅಂಡರ್‌ಪಾಸ್‌– ಮೇಲು ಸೇತುವೆ ಕಾಮಗಾರಿಗಳ ಬಗ್ಗೆ ಅಧಿಕಾರಿಗಳನ್ನು ಸಂಸದರು ಪ್ರಶ್ನಿಸಿದರು. ಅವರು ಅನುದಾನ ನೀಡದ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದತ್ತ ಕೈ ತೋರಿಸಿ ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

ರೈಲು ಯೋಜನೆಗಳ ಅನುಷ್ಠಾನ, ಉಪನಗರ ರೈಲು ಯೋಜನೆ ಜಾರಿ ಸಂಬಂಧಿಸಿ ವಿಶೇಷ ಉದ್ದೇಶದ ಘಟಕ ಸ್ಥಾಪನೆಗೆ ನಿಯೋಗದ ಮೂಲಕ ಮುಂದಿನ ವಾರ ಮುಖ್ಯಮಂತ್ರಿಯವರನ್ನು ಭೇಟಿಯಾಗೋಣ ಎಂದು ಸಂಸದ ಪಿ.ಸಿ.ಮೋಹನ್‌ ಸಲಹೆ ಮಾಡಿದರು.

ಕೆ.ಎಚ್‌. ಮುನಿಯಪ್ಪ ಅವರು, ಕೋಲಾರದಲ್ಲಿ ರೈಲು ಕೋಚ್‌ ಕಾರ್ಖಾನೆ ನಿರ್ಮಾಣ ಸಂಬಂಧಿಸಿ ವಿವರಣೆ ಕೇಳಿದರು.

‘1,118 ಎಕರೆ ಸ್ವಾಧೀನ ಸಂಬಂಧಿಸಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗ ಇರುವ ಕೋಚ್‌ ಫ್ಯಾಕ್ಟರಿ
ಗಳಿಗಿಂತ ಹೆಚ್ಚುವರಿ ಸಾಮರ್ಥ್ಯದ ಕಾರ್ಖಾನೆ ಸ್ಥಾಪಿಸುವ ಕುರಿತು ಇಲಾಖೆ ಪರಿಶೀಲಿಸುತ್ತಿದೆ’ ಎಂದು ಅಧಿಕಾರಿಗಳು ವಿವರಿಸಿದರು.

ಯಲಹಂಕ ನಿಲ್ದಾಣದ ಬಳಿ ಎನ್‌ಇಎಸ್‌ ಅಂಡರ್‌ಪಾಸ್‌ ನಿರ್ಮಾಣಕ್ಕೆ ಬಿಬಿಎಂಪಿ₹ 8.03 ಕೋಟಿ ಅನುದಾನ ನೀಡದಿರುವುದು, ಚನ್ನಪಟ್ಟಣದ ಬಳಿಮೇಲು ಸೇತುವೆ ಪೂರ್ಣಗೊಂಡಿದ್ದರೂ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಭೂಮಿ ಹಸ್ತಾಂತರ ವಿಳಂಬವಾಗಿರುವುದು,ತುಮಕೂರು – ರಾಯದುರ್ಗ ಹೊಸ ಮಾರ್ಗಕ್ಕೆ ತುಮಕೂರು ಜಿಲ್ಲೆಯಲ್ಲಿ ಭೂಸ್ವಾಧೀನ ಬಾಕಿ ಇರುವುದು ಇತ್ಯಾದಿ ಸಂಸದರಿಗೆ ಅಸಮಾಧಾನ ಉಂಟುಮಾಡಿದವು.

ರೈಲ್ವೆ ವಿಭಾಗದಲ್ಲಿ ಇತ್ತೀಚೆಗೆ ಪೂರ್ಣಗೊಂಡ ಕಾಮಗಾರಿಗಳ ಬಗ್ಗೆ ವಿವರ ನೀಡಲಾಯಿತು. ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.