ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕೆಲ ಮತದಾರರಿಗೆ ಹಣ ಹಂಚುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ₹ 7.60 ಲಕ್ಷ ಜಪ್ತಿ ಮಾಡಿದ್ದಾರೆ.
‘ಸ್ಥಳೀಯ ನಿವಾಸಿಗಳಾದ ಭಾಸ್ಕರ್ ಹಾಗೂ ಪಿಂಟೊ ಪ್ರಮೋದ್ ಬಂಧಿತರು. ಇವರಿಬ್ಬರು, ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಆಮಿಷವೊಡ್ಡಿ ಮತದಾರರಿಗೆ ಹಣ ಹಂಚುತ್ತಿದ್ದರೆಂದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಚುನಾವಣಾಧಿಕಾರಿ ತಂಡದ ಜೊತೆ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿಗಳ ಬಳಿಯ ದ್ವಿಚಕ್ರ ವಾಹನದಲ್ಲಿ ₹ 7.60 ಲಕ್ಷ ನಗದು ಸಿಕ್ಕಿದೆ. ಜೊತೆಗೆ, ಕ್ಷೇತ್ರದ ಮತದಾರರ ಪಟ್ಟಿ ಜೆರಾಕ್ಸ್ ಪ್ರತಿಯೂ ಲಭ್ಯವಾಗಿದೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ತಿಳಿಸಿವೆ.
‘ಟಸ್ಕರ್ ಟೌನ್‌ನಲ್ಲಿರುವ ಕೆಲ ಮನೆಗಳಿಗೆ ಶುಕ್ರವಾರ ರಾತ್ರಿ ಹೋಗಿದ್ದ ಆರೋಪಿಗಳು, ಮತದಾರರ ಪಟ್ಟಿ ಪರಿಶೀಲಿಸಿ ಒಬ್ಬೊಬ್ಬರಿಗೆ ₹ 2,000ರಿಂದ ₹3,000 ನೀಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಆರೋಪಿಗಳು, ಬಿಜೆಪಿ ಅಭ್ಯರ್ಥಿ ಹೆಸರು ಹೇಳಿದ್ದಾರೆ. ಅವರಿಂದಲೂ ಮಾಹಿತಿ ಪಡೆಯಬೇಕಿದೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.