ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಕೆ.ಆರ್. ಪೇಟೆಯಲ್ಲಿ ಸಚಿವ ನಾರಾಯಣಗೌಡ ಅವರು ವಾರಕ್ಕೊಮ್ಮೆ ಬಾಡೂಟ ಹಾಕಿಸುವ ಪರಿಪಾಟ ಆರಂಭಿಸಿರುವ ಬೆನ್ನಲ್ಲೇ ನಗರದ ವಿವಿಧೆಡೆಯೂ ಟಿಕೆಟ್ ಆಕಾಂಕ್ಷಿಗಳು ಹಾಗೂ ಘೋಷಿತ ಅಭ್ಯರ್ಥಿಗಳು ಹಾಗೂ ಕೆಲವು ಹಾಲಿ ಶಾಸಕರು ಸೀರೆ, ಟಿ.ವಿ, ಕುಕ್ಕರ್ ಹಾಗೂ ಕೊಡೆ ವಿತರಿಸಿ ಮತದಾರರ ಸೆಳೆಯಲು ಮುಂದಾಗಿದ್ದಾರೆ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಘುವೀರ್ ಎಸ್. ಗೌಡ ಬೀದಿ ಬದಿಯ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಸೂಕ್ತವಾಗಿರುವ ದೊಡ್ಡ ಗಾತ್ರದ 1,000 ಕೊಡೆಗಳನ್ನು ತಮ್ಮದೇ ಹೆಸರಿನ ಚಾರಿಟಬಲ್ ಟ್ರಸ್ಟ್‌ನಿಂದ ವಿತರಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಂಜುಳಾ ವಿಜಯ ಕುಮಾರ್, ಎಚ್.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ರಾಕೇಶ್, ಚಂದ್ರು ಕೊಡೆ ವಿತರಣೆ ಮಾಡಿದರು.
ಚಿಕ್ಕಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಆರ್.ವಿ. ದೇವರಾಜ್ ಅವರು, ಯುಗಾದಿ ಹಬ್ಬಕ್ಕೆ ಕ್ಷೇತ್ರದ ಜನರಿಗೆ ಪಡಿತರ ಕಿಟ್ ವಿತರಿಸುತ್ತಿದ್ದಾರೆ. ಒಟ್ಟು 35 ಸಾವಿರ ಪಡಿತರ ಕಿಟ್, ಸೀರೆ, ಹಾಟ್ ಬಾಕ್ಸ್ ಮತ್ತು ತಿರುಪತಿ ಲಡ್ಡು ವಿತರಣೆ ಮಾಡುವುದಾಗಿ ಅವರ ಆಪ್ತರು ತಿಳಿಸಿದ್ದಾರೆ.
ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ಕ್ಷೇತ್ರಗಳಿಂದ ನಾಲ್ಕು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಆರ್.ಎ.ದೇವರಾಜ್ ಈಗ ಚಿಕ್ಕಪೇಟೆ ಕ್ಷೇತ್ರದಲ್ಲಿ ಮತದಾರರ ಸೆಳೆಯಲು ಮುಂದಾಗಿದ್ದಾರೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್ ಅವರು ನಾಗೇನಹಳ್ಳಿ ಮತ್ತಿತರ ಭಾಗಗಳಲ್ಲಿ ಟಿ.ವಿ ವಿತರಣೆ ಮಾಡಿದ್ದೇ ಅಲ್ಲದೆ ಅದನ್ನು ಫೇಸ್‌ಬುಕ್‌ನಲ್ಲಿಯೂ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.