ADVERTISEMENT

ಧರ್ಮ, ದೇವರು ವಿಚಾರದಲ್ಲಿ ರಾಜಕೀಯ ಅಗತ್ಯವಿಲ್ಲ: ಉಪ ಮುಖ್ಯಮಂತ್ರಿ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 8:40 IST
Last Updated 7 ಜನವರಿ 2024, 8:40 IST
<div class="paragraphs"><p>ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌</p></div>

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

   

‌ಬೆಂಗಳೂರು: ‘ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನನಗೆ ಮತ್ತು ಮುಖ್ಯಮಂತ್ರಿಗೆ ಆಹ್ವಾನ ಬಂದಿಲ್ಲ. ನಮ್ಮ ಅಧ್ಯಕ್ಷರಿಗೆ ಆಹ್ವಾನ ಬಂದಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಪಕ್ಷ ಈ ವಿಚಾರದಲ್ಲಿ ತೀರ್ಮಾನ ಮಾಡುತ್ತದೆ. ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ನಮ್ಮ ಮನೆಯಲ್ಲಿ ಶಿವ, ಹನುಮಂತನ ಭಾವಚಿತ್ರ ಇಟ್ಟು ಪೂಜೆ ಮಾಡುತ್ತೇವೆ. ನಮ್ಮ ಹೃದಯದಲ್ಲಿ ನಮ್ಮ ದೇವರುಗಳನ್ನು ಇಟ್ಟು ಪೂಜಿಸಿಕೊಂಡು ಬಂದಿದ್ದೇವೆ. ಆರೆಸ್ಸೆಸ್‌ ಮತ್ತು ಬಿಜೆಪಿಯವರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯಲ್ಲಿಯೇ ಮಂತ್ರಾಕ್ಷತೆ ಹಂಚುತ್ತಿದ್ದಾರೆ. ಅದೇ ನಮಗೆ ಸಂತೋಷ’ ಎಂದರು.

ADVERTISEMENT

ಬೊಮ್ಮಾಯಿ ಅವರಿಗೆ ಮರೆವು:

‘ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಏನೂ ಇಲ್ಲ. ಇದು ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಆಹಾರ ಭದ್ರತಾ ಕಾಯ್ದೆ ತಂದಿರುವುದು ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ. ಈ ವಿಚಾರವನ್ನು ಬೊಮ್ಮಾಯಿ ಅವರು ಮರೆತಿದ್ದಾರೆ. ನಾವು 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ನನ್ನ ಸ್ನೇಹಿತನಿಗೆ ಮರೆವು ಶುರುವಾಗಿರಬೇಕು’ ಎಂದು ತಿರುಗೇಟು ನೀಡಿದರು.

ನೈಸ್ ವಿಚಾರದಲ್ಲಿ ಟಿ.ಬಿ. ಜಯಚಂದ್ರ ಅವರ ಬಾಯಿಯನ್ನು ಸರ್ಕಾರ ಕಟ್ಟಿಹಾಕಿದೆ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ, ‘ಈ ಬಗ್ಗೆ ಬೇರೆ ಸಮಯದಲ್ಲಿ ಚರ್ಚೆ ಮಾಡೋಣ. ಅಧಿವೇಶನದಲ್ಲಿ ಚರ್ಚೆಗೆ ಬನ್ನಿ ಎಂದು ಅವರಿಗೆ (ಕುಮಾರಸ್ವಾಮಿ) ಹೇಳಿದ್ದೆ. ಅಲ್ಲಿ ಯಾಕೆ ಚರ್ಚೆಗೆ ಬರಲಿಲ್ಲ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ 138 ಶಾಸಕರ ಬಲ:

‘ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಂದಲೇ ಕಾಂಗ್ರೆಸ್ ಅಂತ್ಯ’ ಎಂಬ ಎಚ್‌.ಡಿ. ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸವಿದೆ. ಜನ 135 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಅದರ ಜೊತೆಗೆ ಪಕ್ಷೇತರ ಶಾಸಕರು ಸೇರಿ ನಮ್ಮ ಬಲ 138 ಆಗಿದೆ’ ಎಂದರು.

‘ನಿಮ್ಮ ಹಾಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಹಿಂದೆ ಏನಾದರೂ ತಂತ್ರಗಾರಿಕೆ ಇದೆಯೇ?’ ಎಂದು ಕೇಳಿದಾಗ, ‘ನಮ್ಮನ್ನು ನೆನಪಿಸಿಕೊಳ್ಳುತ್ತಿರಬೇಕು. ಅವರು ಏನೇ ಮಾತನಾಡಿದರೂ ಅದನ್ನು ಆಶೀರ್ವಾದ ಎಂದು ಭಾವಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.