ADVERTISEMENT

ಸದಾಶಿವ ಆಯೋಗದ ವರದಿ; ಚರ್ಚಿಸಿ ತೀರ್ಮಾನ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 2:25 IST
Last Updated 25 ಜುಲೈ 2022, 2:25 IST
ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಪಾಲನಹಳ್ಳಿ ನಡೆದ ಚೌಡೇಶ್ವರಿ ದೂಳೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವರಾದ ಎಚ್‌.ಎಂ.ರೇವಣ್ಣ, ಆಂಜನಮೂರ್ತಿ, ಡಾ.ಸಿದ್ದರಾಜು ಸ್ವಾಮಿ ಹಾಗೂ ಮಾದಿಗ ಸಮುದಾಯದ ಸ್ವಾಮೀಜಿಗಳು ಭಾಗವಹಿಸಿದ್ದರು
ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿ ಪಾಲನಹಳ್ಳಿ ನಡೆದ ಚೌಡೇಶ್ವರಿ ದೂಳೋತ್ಸವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವರಾದ ಎಚ್‌.ಎಂ.ರೇವಣ್ಣ, ಆಂಜನಮೂರ್ತಿ, ಡಾ.ಸಿದ್ದರಾಜು ಸ್ವಾಮಿ ಹಾಗೂ ಮಾದಿಗ ಸಮುದಾಯದ ಸ್ವಾಮೀಜಿಗಳು ಭಾಗವಹಿಸಿದ್ದರು   

ಬೆಂಗಳೂರು: ‘ಒಳ ಮೀಸಲಾತಿ ವರ್ಗೀಕರಣ ಸಂಬಂಧಿಸಿದಂತೆ ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿ ವಿಚಾರವಾಗಿ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ ಜತೆ ಮಾತನಾಡಿದ್ದೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ತೀರ್ಮಾನ ಮಾಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಮಾಗಡಿ ತಾಲ್ಲೂಕು ಸೋಲೂರಿನ ಪಾಲನಹಳ್ಳಿ ಮಠಕ್ಕೆ ಭಾನುವಾರ ಭೇಟಿ ನೀಡಿದ ಅವರು, ಸಿದ್ದರಾಜು ಸ್ವಾಮೀಜಿ ಸೇರಿದಂತೆ ಮಾದಿಗ ಸಮಾಜದ ವಿವಿಧ ಸ್ವಾಮೀಜಿಗಳ ಜತೆ ಸಮಾಲೋಚನೆ‌ ನಡೆಸಿದರು. ಇದೇ ಸಂದರ್ಭದಲ್ಲಿ ಆಷಾಢ ಮಾಸದ ಚೌಡೇಶ್ವರಿ ದೇವಿಯ ದೂಳು ಉತ್ಸವದಲ್ಲಿ ಭಾಗವಹಿಸಿ, ಶನೇಶ್ವರ ದೇವರ ದರ್ಶನ ಪಡೆದರು. ಪಕ್ಷದ ಮುಖಂಡರಾದ ಎಚ್‌.ಎಂ. ರೇವಣ್ಣ, ಎಚ್. ಆಂಜನೇಯ ಕೂಡಾ ಇದ್ದರು.

'ಸದಾಶಿವ ಆಯೋಗವನ್ನು ಎಸ್.ಎಂ. ಕೃಷ್ಣ ಕಾಲದಲ್ಲಿ ಕಾಂಗ್ರೆಸ್ ರಚನೆ ಮಾಡಿತ್ತು. ವರದಿಯನ್ನು ನೇರ ವಾಗಿ ಸಂಪುಟದ ಮುಂದೆ ಮಂಡಿಸಲಾಗಿತ್ತು. ಅದನ್ನು ತಕ್ಷಣ ಜಾರಿಗೆ ತರಲು ಆಗಲಿಲ್ಲ’ ಎಂದು ಸ್ವಾಮೀಜಿಗಳಿಗೆ ಶಿವಕುಮಾರ್‌ ಹೇಳಿದರು.

ADVERTISEMENT

ಸ್ವಾಮೀಜಿಗಳು ಮಾತನಾಡಿ, ‘ಮಾದಿಗ ಸಮುದಾಯದ ಹೆಚ್ಚಿನ ಜನ ಕೂಲಿ ಮಾಡಿಯೇ ಬದುಕುತ್ತಿದ್ದಾರೆ. ಮಕ್ಕಳು ಎಸ್ಸೆಸ್ಸೆಲ್ಸಿಯವರೆಗೂ ಓದುತ್ತಾರೆ. ಆದರೆ, ಮುಂದೆ ಓದಿಸಲು ಪೋಷಕರಿಗೆ ಸಾಧ್ಯವಾಗುತ್ತಿಲ್ಲ ಎಂದರು

ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್‌, ‘ಮಾದಿಗ ಸಮುದಾ ಯದ ಎಲ್ಲ ಮಠಾಧೀಶರ ಜೊತೆ ಚರ್ಚೆ ಮಾಡಿದ್ದೇನೆ. ಅವರು ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳನ್ನು ಪಕ್ಷದ ನಾಯಕರ ಮುಂದೆ ಪ್ರಸ್ತಾಪಿಸಿ ಚರ್ಚೆ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.