ಬೆಂಗಳೂರು: ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ‘ಹಬ್’ ನಿರ್ಮಿಸುವ ಬಿಎಂಆರ್‌ಸಿಎಲ್ ಯೋಜನೆಗೆ ಜಮೀನು ಒದಗಿಸುವ ಕಾರ್ಯ ಇನ್ನೂ ಕಾರ್ಯಗತಗೊಂಡಿಲ್ಲ. ಇದರ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ ಈ ಕುರಿತು ಚರ್ಚಿಸಲು ಅ.18ರಂದು ಅನೌಪಚಾರಿಕವಾಗಿ ಸಭೆ ನಡೆಸಲಿದ್ದಾರೆ.
ರೈಲು, ಮೆಟ್ರೊ ರೈಲು, ಉಪನಗರ ರೈಲು, ಬಿಎಂಟಿಸಿ ಬಸ್‌ಗಳು ಹಾದುಹೋಗುವ ಹೆಬ್ಬಾಳದಲ್ಲಿ ಬಹುಮಾದರಿ ಸಾರಿಗೆ ನಿರ್ಮಿಸಲು 45 ಎಕರೆ 5.5 ಗುಂಟೆ ಜಮೀನು ಅಗತ್ಯ ಎಂದು ಬಿಎಂಆರ್‌ಸಿಎಲ್ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯನ್ನು ಕೋರಿತ್ತು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) 55 ಎಕರೆ ಜಮೀನು ಇಲ್ಲಿದ್ದು, ಹಿಂದೆ ಬೇರೆ ಯೋಜನೆ ರೂಪಿಸಿದ್ದರೂ ಕಾರ್ಯಗತಗೊಂಡಿಲ್ಲ. ಬಹುಮಾದರಿ ಸಾರಿಗೆ ಹಬ್ ನಿರ್ಮಾಣಕ್ಕೆ ಈ ಜಮೀನು ಒದಗಿಸಬೇಕು ಎಂದು ಪ್ರಸ್ತಾವ ಸಲ್ಲಿಸಿತ್ತು.
ಮೆಟ್ರೊ ನೀಲಿ ಮಾರ್ಗ ನಿರ್ಮಾಣಕ್ಕಾಗಿ ಕೆಎಐಡಿಬಿ ಜಮೀನು ಅಗತ್ಯವಿದ್ದಾಗ ಎಕರೆಗೆ ₹ 12.10 ಕೋಟಿ ಪಾವತಿಸಿ ಪಡೆಯಲಾಗಿತ್ತು. ಈಗ ಅಗತ್ಯ ಇರುವ ಜಮೀನಿಗೆ ಅದೇ ದರವನ್ನು ನೀಡಲು ಬಿಎಂಆರ್‌ಸಿಎಲ್ ತಯಾರಿದೆ. ಜಮೀನು ಒದಗಿಸಿದರೆ ಅಲ್ಲಿ ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ, ಡಿಪೊ, ಎಲ್ಲ ಸಾರಿಗೆಗಳನ್ನು ಒಂದು ಸಂಯೋಜನೆಯಡಿ ತರಲು ಸಂಪರ್ಕ ಕೊಂಡಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿತ್ತು.
ಬಿಎಂಆರ್‌ಸಿಎಲ್‌ನ ಈ ಪತ್ರದ ಬಗ್ಗೆ ಜುಲೈಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಉನ್ನತಾಧಿಕಾರ ಸಮಿತಿಯಲ್ಲಿ ಚರ್ಚಿಸಿದ್ದು, ಬಹುಮಾದರಿ ಸಾರಿಗೆ ಹಬ್ ನಿರ್ಮಾಣಕ್ಕೆ ಜಮೀನು ಒದಗಿಸುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸುವಂತೆ ಕೋರಿತ್ತು. ಬಿಎಂಆರ್‌ಸಿಎಲ್‌ಗೆ ₹ 515.15 ಕೋಟಿ ಮೊತ್ತಕ್ಕೆ 45 ಎಕರೆ 5.5 ಗುಂಟೆ ಜಮೀನನ್ನು ನೀಡಲು ಕೆಎಐಡಿಬಿ ಒಪ್ಪಿತ್ತು. ಇದಕ್ಕಾಗಿ ರಾಜ್ಯ ಸರ್ಕಾರವು ಭೂಸ್ವಾಧೀನ ಪ್ರಕ್ರಿಯೆಗಾಗಿ ಬಿಎಂಆರ್‌ಸಿಎಲ್‌ಗೆ ಒದಗಿಸುವ ಹೆಚ್ಚುವರಿ ಸಾಲದ ಮೊತ್ತವನ್ನು ಬಳಸಿಕೊಳ್ಳುವ ಬಗ್ಗೆಯೂ ಚರ್ಚಿಸಲಾಗಿತ್ತು.
ಆನಂತರ ಈ ಪ್ರಕ್ರಿಯೆ ಅಲ್ಲಿಗೆ ನಿಂತು ಹೋಗಿತ್ತು. ಇದೀಗ ಡಿ.ಕೆ. ಶಿವಕುಮಾರ್ ಮತ್ತು ಎಂ.ಬಿ. ಪಾಟೀಲ ಈ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆಸಲು ಮುಂದಾಗಿದ್ದಾರೆ. ಹೆಬ್ಬಾಳದಲ್ಲಿ ಲಭ್ಯವಿರುವ ಜಮೀನಿನ ಬಳಕೆ ಕುರಿತು ಈ ಸಭೆಯಲ್ಲಿ ಖಚಿತ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೂರು ಮೆಟ್ರೊ ಸಂಪರ್ಕಿಸುವ ಪ್ರದೇಶ
ಸೆಂಟ್ರಲ್ ಸಿಲ್ಕ್ ಬೋರ್ಡ್– ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನಮ್ಮ ಮೆಟ್ರೊ ನೀಲಿ ಮಾರ್ಗವು ನಿರ್ಮಾಣ ಹಂತದಲ್ಲಿದ್ದು, ಈ ಮಾರ್ಗವು ಹೆಬ್ಬಾಳ ಮೂಲಕ ಹಾದುಹೋಗುತ್ತಿದೆ.
ಜೆ.ಪಿ.ನಗರದಿಂದ ಕೆಂಪಾಪುರದವರೆಗಿನ ಮೆಟ್ರೊ ಮಾರ್ಗಕ್ಕೆ (ಕಿತ್ತಳೆ ಮಾರ್ಗ) ಕೇಂದ್ರ ಸರ್ಕಾರ ತಿಂಗಳ ಹಿಂದೆ ಅನುಮೋದನೆ ನೀಡಿದೆ. ಹೆಬ್ಬಾಳ–ಸರ್ಜಾಪುರ (ಕೆಂಪು) ಮೆಟ್ರೊ ಮಾರ್ಗ ಕೂಡ ಮುಂದೆ ಸಂಪರ್ಕಿಸಲಿದೆ.
ಮೂರು ಮೆಟ್ರೊ ಮಾರ್ಗಗಳು ಸಂಪರ್ಕಿಸುವ ಹೆಬ್ಬಾಳದಲ್ಲಿ ಉಪನಗರ ರೈಲು ಹಾದು ಹೋಗುತ್ತದೆ. ದೇವನಹಳ್ಳಿಯಲ್ಲಿ ಇರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯೂ ಇದೇ ಮಾರ್ಗದಲ್ಲಿ ಇರುವುದರಿಂದ ಹೆಚ್ಚು ವಾಹನದಟ್ಟಣೆ ಇರುವ ಪ್ರದೇಶ ಇದಾಗಿದೆ.
ಈ ಎಲ್ಲ ಕಾರಣದಿಂದ ಬಹುಮಾದರಿ ಸಾರಿಗೆ ಹಬ್ ನಿರ್ಮಾಣದ ಯೋಜನೆಯನ್ನು ಬಿಎಂಆರ್‌ಸಿಎಲ್ ರೂಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.