ಬೆಂಗಳೂರು: ‘ಬರಹವೂ ಸೇರಿದಂತೆ ಯಾವುದೇ ವಿಶೇಷ ಕಾರ್ಯಗಳನ್ನು ಪ್ರಶಸ್ತಿಗಾಗಿ ಮಾಡುವುದಿಲ್ಲ. ಮಾಡಿದ ಕೆಲಸಕ್ಕೆ ಪ್ರಶಸ್ತಿ ಬಂದರೆ ಸ್ವೀಕರಿಸುವುದು ತಪ್ಪಲ್ಲ’ ಎಂದು ಸಾಹಿತಿ ಸರಸ್ವತಿ ವಿಜಯಕುಮಾರ್ ಹೇಳಿದರು.
ಪಂಡಿತರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ವತಿಯಿಂದ ಭಾನುವಾರ ನಗರದಲ್ಲಿ ‘ಆದರ್ಶ ಜೈನ ಮಹಿಳಾ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಪ್ರಥಮಾನುಯೋಗ, ಚರಣಾನುಯೋಗ, ಕರಣಾನುಯೋಗ, ದ್ರವ್ಯಾನುಯೋಗ ಗ್ರಂಥಗಳು ಜೈನರ ಆಧಾರ ಗ್ರಂಥಗಳು. ಅದರಲ್ಲಿ ಪ್ರಥಮಾನುಯೋಗಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಮಹಾಗ್ರಂಥವನ್ನು ಶಾಂತಿರಾಜ ಶಾಸ್ತ್ರಿಯವರು ರಚಿಸಿ ನೀಡಿದ್ದರಿಂದ ಹಲವು ತೌಲನಿಕ ಅಧ್ಯಯನಕ್ಕೆ ನೆರವಾಯಿತು’ ಎಂದು ಹೇಳಿದರು.
ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ, ‘ಜೈನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಬಹಳ ಪ್ರಶಸ್ತಿಗಳಿಲ್ಲ. ಬೆರಳೆಣಿಕೆಯ ಮಹತ್ವದ ಪ್ರಶಸ್ತಿಗಳಲ್ಲಿ ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ನೀಡುವ ಆದರ್ಶ ಮಹಿಳಾ ರತ್ನ ಪ್ರಶಸ್ತಿಯೂ ಒಂದು’ ಎಂದು ವಿವರಿಸಿದರು.
ಜಿನೇಂದ್ರ ವರ್ಣಿ ಹಿಂದಿಯಲ್ಲಿ ಸಂಪಾದಿಸಿದ ಸಿದ್ಧಾಂತಕೋಶವನ್ನು ಅನುವಾದಿಸುವುದರ ಜೊತೆಗೆ ಕನ್ನಡದ ಶಬ್ದಗಳನ್ನೂ ಸೇರಿಸುವ ಕಾರ್ಯವನ್ನು ಸರಸ್ವತಿ ವಿಜಯಕುಮಾರ್ ಮತ್ತು ಬಳಗ ಮಾಡಿದ್ದಾರೆ. ಕನ್ನಡದಲ್ಲಿ ಜೈನ ವಿಶ್ವಕೊಶ ಬಂದಿಲ್ಲ. ನಮ್ಮಲ್ಲಿ ಆರ್ಥಿಕ ಸಂಪನ್ಮೂಲದ ಕೊರತೆ ಇಲ್ಲ. ತಜ್ಞರನ್ನು ಹುಡುಕಿ ಈ ಕೆಲಸ ಮಾಡಿಸಬೇಕು’ ಎಂದು ಸಲಹೆ ನೀಡಿದರು.
ಪಂಡಿತರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಅಧ್ಯಕ್ಷ ಎಸ್. ಜಿತೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತ್ಯಾಗಿ ಸೇವಾ ಸಮಿತಿ ಅಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ಉದ್ಘಾಟಿಸಿದರು. ಭಾರತೀಯ ಜೈನ ಮಿಲನ್ ಕಾರ್ಯಾಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಮಕ್ಕಳ ಹೃದಯ ತಜ್ಞೆ ಡಾ. ವಿಜಯಲಕ್ಷ್ಮೀ ಐ. ಬಾಳೇಕುಂದ್ರಿ ಮಾತನಾಡಿದರು.
ಟ್ರಸ್ಟ್‌ನ 35ನೇ ವಾರ್ಷಿಕೋತ್ಸವ ಮತ್ತು 24ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.