ದಾಬಸ್‌ಪೇಟೆ: ನಿರುದ್ಯೋಗಿಗಳು ಮತ್ತು ಉದ್ಯಮಿಗಳಿಗೆ ಸಂಪರ್ಕ ಸೇತುವೆಯಾಗುವ ಉದ್ದೇಶದಿಂದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ದಾಬಸ್‍ಪೇಟೆಯಲ್ಲಿ ಸುಸಜ್ಜಿತವಾದ ಉತ್ಕೃಷ್ಟತೆ ಮತ್ತು ಆವಿಷ್ಕಾರ ಕೇಂದ್ರ ನಿರ್ಮಾಣ ಮಾಡುತ್ತಿದೆ.
ದಾಬಸ್‌ಪೇಟೆ 4ನೇ ಹಂತದ ಕೈಗಾರಿಕಾ ಪ್ರದೇಶದ 5 ಎಕರೆ ಜಾಗದಲ್ಲಿ ₹35 ಕೋಟಿ ಅಂದಾಜು ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗುತ್ತಿದೆ. ಕೇಂದ್ರದಲ್ಲಿ 6 ಕಲಿಕಾ ಕೇಂದ್ರಗಳು ಹಾಗೂ 6 ತಂತ್ರಜ್ಞಾನ ಕೇಂದ್ರಗಳು ಇರಲಿವೆ. ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಜೂನ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದು ಕಾಸಿಯಾ ಅಧ್ಯಕ್ಷ ಆರ್. ರಾಜು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕಡಿಮೆ ವಿದ್ಯಾರ್ಹತೆ ಇರುವ ಯುವ ಜನರಿಗೆ ಕಲಿಕಾ ಕೇಂದ್ರಗಳಲ್ಲಿ 3 ತಿಂಗಳ ತರಬೇತಿ ನೀಡಲಾಗುತ್ತದೆ. ಫ್ಯಾಬ್ರಿಕೇಶನ್, ವೆಲ್ಡಿಂಗ್,ಸಿದ್ಧ ಉಡುಪು, ಪಾದರಕ್ಷೆ ಉತ್ಪನ್ನ, ಎಲೆಕ್ಟ್ರಿಕಲ್ಸ್ ಸೇರಿದಂತೆ ಅವರ ಆಸಕ್ತಿ ಆಧರಿಸಿ ಎಲ್ಲಾ ರೀತಿಯ ತರಬೇತಿ ನೀಡಿ ಅವರ ಕೌಶಲ ಶಕ್ತಿಯನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದರು.
12 ಸಾವಿರ ಜನರಿಗೆ ತರಬೇತಿ: ‘ಈ ಕೇಂದ್ರ ಉದ್ಘಾಟನೆಗೊಂಡ ಮೂರು ವರ್ಷಗಳಲ್ಲಿ 12 ಸಾವಿರ ಯುವಜನರಿಗೆ ಕೌಶಲ ತರಬೇತಿ ನೀಡುವ ಗುರಿ ಇದೆ. ಅಭ್ಯರ್ಥಿಗೆ 2 ವಾರ ವ್ಯಕ್ತಿತ್ವ ವಿಕಸನ, 2 ವಾರ ಪ್ರಾಥಮಿಕ ಮಾಹಿತಿ ನೀಡಿ, ನಂತರ ಅವರ ಆಸಕ್ತಿ ಆಧರಿಸಿ 2 ತಿಂಗಳ ಕೌಶಲ ಅಭಿವೃದ್ಧಿ ತರಬೇತಿ ನೀಡಲಾಗುವುದು’ ಎಂದು ಕೇಂದ್ರದ ಅಧ್ಯಕ್ಷ ಆರ್. ಪೃಥ್ವಿರಾಜ್ ಮಾಹಿತಿ ನೀಡಿದರು.
ಕಾಸಿಯಾದಲ್ಲಿ 12 ಸಾವಿರ ಸದಸ್ಯರಿದ್ದು, 128 ಸಂಯೋಜಿತ ಸಂಘಗಳಿವೆ. ಒಟ್ಟಾರೆ 6.5 ಲಕ್ಷ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಕಾಸಿಯಾ ಜತೆಯಲ್ಲಿವೆ. ತರಬೇತಿ ಪಡೆದವರನ್ನು ಈ ಕೈಗಾರಿಕೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಸುಸಜ್ಜಿತ ವಸ್ತುಪ್ರದರ್ಶನ ಕೇಂದ್ರ: 50 ಸಾವಿರ ಚದರ ಅಡಿ ಜಾಗದಲ್ಲಿ ಸುಸಜ್ಜಿತ ಪ್ರದರ್ಶನ ಕೇಂದ್ರ ನಿರ್ಮಾಣವಾಗುತ್ತಿದೆ. 400 ಮಳಿಗೆಗಳನ್ನು ತೆರೆದು ಪ್ರದರ್ಶನ ನಡೆಸಲು ಅವಕಾಶವಿದೆ. ತುಮಕೂರು ರಸ್ತೆಯ ಬಿಐಇಸಿಯಲ್ಲಿ ದರ ಹೆಚ್ಚಿರುವುದರಿಂದ ಸಣ್ಣ
ಉದ್ಯಮಗಳು ಪ್ರದರ್ಶನ ನಡೆಸಲು ಇದು ನೆರವಾಗಲಿದೆ. ಜತೆಗೆ ಉದ್ಯಮಿಗಳು ಸಭೆ ನಡೆಸಲು ಅವಕಾಶವಿದೆ
ಎಂದರು.
ಹೊಸದಾಗಿ ಕೈಗಾರಿಕೆ ಆರಂಭಿಸಲು ಮುಂದೆ ಬರುವವರಿಗೂ ಎಲ್ಲಾ ರೀತಿಯ ನೆರವು ಈ ಕೇಂದ್ರದಲ್ಲಿ ದೊರೆಯಲಿದೆ. ಬ್ಯಾಂಕ್ ಸಾಲ, ಮಾರುಕಟ್ಟೆ, ರಫ್ತು ವಹಿವಾಟಿನ ಬಗ್ಗೆಯೂ ಯುವಕರಿಗೆ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
₹20 ಕೋಟಿಗೆ ಮನವಿ:₹35 ಕೋಟಿ ಮೊತ್ತದ ಈ ಯೋಜನೆಗೆ ರಾಜ್ಯ ಸರ್ಕಾರದಿಂದ ₹20 ಕೋಟಿ ಅನುದಾನ ಕೋರಲಾಗಿದೆ ಎಂದು ಆರ್. ರಾಜು ತಿಳಿಸಿದರು.
‘ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ₹ 5 ಕೋಟಿ ಬಂಡವಾಳ ಹೂಡಿದ್ದು, ರಾಜ್ಯ ಸರ್ಕಾರ ₹5 ಕೋಟಿ ಅನುದಾನ ನೀಡಿದೆ. ಬ್ಯಾಂಕ್‌ನಿಂದ ₹5 ಕೋಟಿ ಸಾಲ ಪಡೆಯಲಾಗಿದೆ. ಇನ್ನೂ ₹20 ಕೋಟಿ ಬೇಕಿದೆ’ ಎಂದರು.
ಕೈಗಾರಿಕಾ ಕ್ಲಸ್ಟರ್:ಕೈಗಾರಿಕೆಗಳನ್ನು ನಗರದೊಳಗಿಂದ ಹೊರಕ್ಕೆ ತಂದು ಅಲ್ಲಲ್ಲಿ ಕೈಗಾರಿಕಾ ಕ್ಲಸ್ಟರ್ ನಿರ್ಮಿಸುವ ಬಗ್ಗೆಯೂ ಕಾಸಿಯಾ ಹೆಜ್ಜೆ ಇಟ್ಟಿದ್ದು, ನಾಲ್ಕೈದು ಕಡೆ ಜಾಗ ಗುರುತಿಸಲಾಗಿದೆ ಎಂದು ಆರ್. ಪೃಥ್ವಿರಾಜ್ ತಿಳಿಸಿದರು. ‘250ರಿಂದ 300 ಎಕರೆ ಜಾಗದಲ್ಲಿ ಕೈಗಾರಿಕೆ ಪ್ರದೇಶಗಳನ್ನು ನಿರ್ಮಾಣ ಮಾಡಿದರೆ ಕಾಮಾಕ್ಷಿಪಾಳ್ಯ, ಪ್ರಕಾಶನಗರದ ಕಿಷ್ಕಿಂದೆಯಲ್ಲಿ ಸಿಲುಕಿಕೊಂಡಿರುವ ಕೈಗಾರಿಕೆಗಳನ್ನು ಸ್ಥಳಾಂತರ ಮಾಡಬಹುದು. ಇದರಿಂದ ಉದ್ಯೋಗಾವಕಾಶಗಳೂ ಹೆಚ್ಚಾಗಲಿವೆ’ ಎಂದರು.
‘ವಿಶೇಷ ವಾಹಕ ವ್ಯವಸ್ಥೆ (ಎಸ್‌ಪಿವಿ) ಮೂಲಕ ಈ ಯೋಜನೆ ಆರಂಭಿಸಲು ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲಾಗಿದೆ. ಹೊಸ ಕೈಗಾರಿಕಾ ನೀತಿ ಜಾರಿಯಾದರೆ ಕೈಗಾರಿಕೆಗಳು ಇನ್ನಷ್ಟು ಬೆಳೆಯಲಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.