ADVERTISEMENT

ವೈದ್ಯೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ: ವೈದ್ಯನ ವಿರುದ್ಧ ಎಫ್‌ಐಆರ್

ನಗರದ ವೈದ್ಯಕೀಯ ಕಾಲೇಜೊಂದರ ವಿಭಾಗದ ಮುಖ್ಯಸ್ಥೆಯೇ ಸಂತ್ರಸ್ತೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 15:01 IST
Last Updated 9 ಫೆಬ್ರುವರಿ 2024, 15:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜೊಂದರ ವಿಭಾಗದ ಮುಖ್ಯಸ್ಥರಾಗಿರುವ ವೈದ್ಯೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಕೃತ್ಯ ಎಸಗಿರುವ ಆರೋಪದಡಿ ಅದೇ ಕಾಲೇಜಿನ ವೈದ್ಯರೊಬ್ಬರ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಜ. 19ರಿಂದ 24ರವರೆಗಿನ ಅವಧಿಯಲ್ಲಿ ನಡೆದಿರುವ ಕೃತ್ಯದ ಬಗ್ಗೆ 51 ವರ್ಷ ವಯಸ್ಸಿನ ವೈದ್ಯೆ ದೂರು ನೀಡಿದ್ದಾರೆ. ಅವರದ್ದೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಬನಶಂಕರಿ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ವಿಭಾಗದ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ವಿಚಾರವಾಗಿ ಗೊಂದಲ ಉಂಟಾಗಿತ್ತು. ಅದನ್ನು ವೈದ್ಯೆ ಪ್ರಶ್ನಿಸಿದ್ದರು. ಅಷ್ಟಕ್ಕೇ ಸಿಟ್ಟಾಗಿದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಗೌರವಕ್ಕೆ ಧಕ್ಕೆ ತಂದಿದ್ದರು. ಇದರಿಂದ ನೊಂದಿದ್ದ ವೈದ್ಯೆ, ಆರೋಪಿ ಕೃತ್ಯದ ವಿರುದ್ಧ ಪ್ರಾಂಶುಪಾಲರಿಗೆ ದೂರು ನೀಡಿದ್ದರು.’

‘ದೂರು ನೀಡಿದ್ದರಿಂದ ಕೋಪಗೊಂಡಿದ್ದ ಆರೋಪಿ ವೈದ್ಯ, ಸಂತ್ರಸ್ತೆಯ ಕೊಠಡಿಗೆ ನುಗ್ಗಿದ್ದ. ಕೈ ಹಿಡಿದು ಎಳೆದಾಡಿದ್ದ. ಎದೆ ಮುಟ್ಟಿ ದೌರ್ಜನ್ಯ ಎಸಗಿದ್ದ. ‘ನನ್ನ ವಿರುದ್ಧ ದೂರು ನೀಡುತ್ತಿಯಾ? ನೀನು ಎಂಥಾ ಹೆಣ್ಣು ಎಂದು ಎಲ್ಲರಿಗೂ ಗೊತ್ತಿದೆ. ದೂರು ವಾಪಸು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ, ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಆರೋಪಿ ಕೊಲೆ ಬೆದರಿಕೆಯೊಡ್ಡಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ದೂರು ವಾಪಸು ತೆಗೆದುಕೊಳ್ಳದೇ ಇದ್ದುದರಿಂದ, ಕಾಲೇಜಿನಲ್ಲಿ ಇತರರ ಬಳಿ ಸಂತ್ರಸ್ತೆ ಬಗ್ಗೆ ಆರೋಪಿ ಕೆಟ್ಟದಾಗಿ ಮಾತನಾಡಲಾರಂಭಿಸಿದ್ದ. ಇದನ್ನು ಸಂತ್ರಸ್ತೆ ಪ್ರಶ್ನಿಸಿದ್ದರು. ಪುನಃ ಆರೋಪಿ ವೈದ್ಯೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದನೆಂದು ಗೊತ್ತಾಗಿದೆ. ಈ ಸಂಗತಿ ದೂರಿನಲ್ಲಿದೆ. ಆರೋಪಿ ವೈದ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.