ADVERTISEMENT

ಹನಿಟ್ರ್ಯಾಪ್‌: ಎಂಬಿಬಿಎಸ್ ಸೀಟು ಕೊಡಿಸುವ ನೆಪ, ವೈದ್ಯನಿಂದ ₹ 1.16 ಕೋಟಿ ಸುಲಿಗೆ

ಪೊಲೀಸರ ಸೋಗಿನಲ್ಲಿ ವಸತಿಗೃಹ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 28 ಮೇ 2022, 2:43 IST
Last Updated 28 ಮೇ 2022, 2:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಲಬುರಗಿ ಜಿಲ್ಲೆಯ ಆಳಂದದ ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 1.16 ಕೋಟಿ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಆಳಂದದ ನಾಗರಾಜ್ ಬೋರುಪಿ, ಬೆಂಗಳೂರಿನ ಮಧು ಹಾಗೂ ಓಂಪ್ರಕಾಶ್ ಬಂಧಿತರು. ಸಂತ್ರಸ್ತ ವೈದ್ಯ ಶಂಕರ್‌ ಬಾಬು ರಾವ್ ನೀಡಿದ್ದ ದೂರು ಆಧರಿಸಿ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ಎಂಬಿಬಿಎಸ್ ಸೀಟು ಕೊಡಿಸುವ ನೆಪ: ‘ವೈದ್ಯ ಶಂಕರ್, ತಮ್ಮ ಮಗನನ್ನು ಎಂಬಿಬಿಎಸ್ ಓದಿಸಲು ಯೋಚಿಸಿದ್ದರು. ಪರಿಚಯಸ್ಥನಾದ ನಾಗರಾಜ್, ಬೆಂಗಳೂರಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದ. ಅದಕ್ಕಾಗಿ 2021ರ ಫೆಬ್ರುವರಿಯಲ್ಲಿ ಹಂತ ಹಂತವಾಗಿ ₹ 66 ಲಕ್ಷ ಪಡೆದಿದ್ದ. ಆದರೆ, ಯಾವುದೇ ಸೀಟು ಕೊಡಿಸಿರಲಿಲ್ಲ. ಹಣ ವಾಪಸು ನೀಡುವಂತೆ ವೈದ್ಯ ಒತ್ತಾಯಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಸತಿಗೃಹದಲ್ಲಿ ಹನಿಟ್ರ್ಯಾಪ್: ‘ಹಣ ವಾಪಸು ಕೊಡುವುದಾಗಿ ಹೇಳಿದ್ದ ನಾಗರಾಜ್, ವೈದ್ಯ ಶಂಕರ್ ಅವರನ್ನು 2022ರ ಜನವರಿಯಲ್ಲಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಇನ್ನೊಬ್ಬ ಆರೋಪಿ ಮಧು ಪರಿಚಯ ಮಾಡಿಸಿದ್ದ. ನಂತರ, ವೈದ್ಯನಿಗೆ ಉಳಿದುಕೊಳ್ಳಲು ಮೆಜೆಸ್ಟಿಕ್‌ನಲ್ಲಿರುವ ಯು.ಟಿ ವಸತಿಗೃಹದಲ್ಲಿ ಕೊಠಡಿ ಮಾಡಿಕೊಡಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ನಾಗರಾಜ್ ಹಾಗೂ ವೈದ್ಯ ಶಂಕರ್ ಮಾತ್ರ ಕೊಠಡಿಯಲ್ಲಿದ್ದರು. ನಸುಕಿನ ಸಮಯದಲ್ಲಿ ಇಬ್ಬರು ಯುವತಿಯರು ಏಕಾಏಕಿ ಕೊಠಡಿಗೆ ಬಂದು ಶಂಕರ್ ಅಕ್ಕ–ಪಕ್ಕದಲ್ಲಿ ಕುಳಿತಿದ್ದರು. ಅದೇ ಸಮಯಕ್ಕೆ ಪೊಲೀಸರ ಸೋಗಿನಲ್ಲಿ ಮೂವರು ಕೊಠಡಿಗೆ ಬಂದಿದ್ದರು. ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ವಸತಿಗೃಹದ ಮೇಲೆ ದಾಳಿ ಮಾಡಿರುವುದಾಗಿ ಹೇಳಿದ್ದರು. ವೈದ್ಯ ಹಾಗೂ ಯುವತಿಯರ ಫೋಟೊ ಕ್ಲಿಕ್ಕಿಸಿಕೊಂಡಿದ್ದರು’ ಎಂದೂ ತಿಳಿಸಿವೆ.

‘ವೇಶ್ಯಾವಾಟಿಕೆ ಆರೋಪದಡಿ ಬಂಧಿಸಲಾಗುವುದೆಂದು ಶಂಕರ್ ಅವರನ್ನು ಆರೋಪಿಗಳು ಹೆದರಿಸಿದ್ದರು. ನಂತರ, ಅವರ ಬಳಿಯ ಚಿನ್ನಾಭರಣ ಹಾಗೂ ₹ 35 ಸಾವಿರ ನಗದು ಕಿತ್ತುಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ, ₹ 70 ಲಕ್ಷಕ್ಕೆ ಬೇಡಿಕೆ ಇರಿಸಿದ್ದರು. ಮರ್ಯಾದೆಗೆ ಹೆದರಿದ್ದ ವೈದ್ಯ, ಊರಿಗೆ ಹೋಗಿ ₹ 50 ಲಕ್ಷ ಹೊಂದಿಸಿ ಕೊಡುವುದಾಗಿ ಒಪ್ಪಿದ್ದರು’ ಎಂದೂ ಮೂಲಗಳು ವಿವರಿಸಿವೆ.

ಮನೆ ಅಡವಿಟ್ಟು ₹ 50 ಲಕ್ಷ ಸಾಲ: ‘ಬೆಂಗಳೂರು ಪೊಲೀಸರ ಸೋಗಿನಲ್ಲಿ ಕಲಬುರಗಿಗೆ ಹೋಗಿದ್ದ ಆರೋಪಿಗಳು, ವೈದ್ಯನನ್ನು ಭೇಟಿಯಾಗಿ ಹಣ ನೀಡುವಂತೆ ಕೇಳಿದ್ದರು. ಮನೆ ದಾಖಲೆಗಳನ್ನು ಛತ್ರಪತಿ ಶಿವಾಜಿ ಮಹಾರಾಜ ಸೊಸೈಟಿಯಲ್ಲಿ ಅಡವಿಟ್ಟಿದ್ದ ವೈದ್ಯ, ₹ 50 ಲಕ್ಷ ಸಾಲ ಪಡೆದುಕೊಂಡು ಕಲಬುರಗಿ ಎಸ್ಪಿ ಕಚೇರಿ ಬಳಿಯೇ ಆರೋಪಿಗಳಿಗೆ ನೀಡಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಪ್ರಕರಣದಲ್ಲಿ ಯುವತಿಯರಿಗೆ ಜಾಮೀನು ಕೊಡಿಸಬೇಕೆಂದು ಹೇಳಿ ಪುನಃ ₹ 20 ಲಕ್ಷಕ್ಕೆ ಆರೋಪಿಗಳು ಬೇಡಿಕೆ ಇರಿಸಿದ್ದರು. ಹಣವಿಲ್ಲವೆಂದು ವೈದ್ಯ ಹೇಳಿದ್ದರು. ಯುವತಿಯರ ಸಮೇತ ಊರಿಗೆ ಹೋಗಿದ್ದ ಆರೋಪಿಗಳು, ಮನೆ ಎದುರು ಗಲಾಟೆ ಮಾಡಿದ್ದರು. ಸ್ಥಳೀಯರು ಆರೋಪಿಗಳನ್ನು ಹಿಡಿದುಕೊಂಡು ಠಾಣೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ, ಆರೋಪಿಗಳು ಓಡಿ ಹೋಗಿದ್ದರು’ ಎಂದೂ ತಿಳಿಸಿವೆ.

‘ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ವೈದ್ಯ ಶಂಕರ್ ರೀತಿಯಲ್ಲೇ ಮತ್ತಷ್ಟು ಮಂದಿಗೆ ವಂಚನೆ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿದಿದೆ’ ಎಂದೂ ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.