ADVERTISEMENT

ವೈದ್ಯ ವಿದ್ಯಾರ್ಥಿನಿ ಹತ್ಯೆ: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ OPD 24 ಗಂಟೆ ಬಂದ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 23:40 IST
Last Updated 16 ಆಗಸ್ಟ್ 2024, 23:40 IST
ಡಾ.ಎಸ್. ಶ್ರೀನಿವಾಸ್
ಡಾ.ಎಸ್. ಶ್ರೀನಿವಾಸ್   

ಬೆಂಗಳೂರು: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ ರಾಜ್ಯದಲ್ಲೂ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ ನೇತೃತ್ವದಲ್ಲಿ ‌ಶನಿವಾರ ಮುಷ್ಕರ ನಡೆಯಲಿದೆ.

ಶನಿವಾರ ಬೆಳಿಗ್ಗೆ 6ರಿಂದ ಭಾನುವಾರ ಬೆಳಿಗ್ಗೆ 6ರ ವರೆಗೆ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳು (ಒಪಿಡಿ) ಬಂದ್ ಇರಲಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮಾತ್ರ ದೊರೆಯಲಿವೆ. ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಕೆಲ ವೈದ್ಯರು ಐಎಂಎ ಸದಸ್ಯರೂ ಆಗಿರುವುದರಿಂದ ಅವರು ಸೇವೆಗೆ ಗೈರಾಗುವ ಸಾಧ್ಯತೆಯಿದೆ. ಇದರಿಂದ ಸೇವೆಯಲ್ಲಿ ವ್ಯತ್ಯಯವಾಗುವ ಸಂಭವವಿದೆ. ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್‌ ಸೇವೆ ಎಂದಿನಂತೆ ಇರಲಿದ್ದು, ಔಷಧ ಮಳಿಗೆಗಳೂ ಯಥಾ ಪ್ರಕಾರ ಕಾರ್ಯನಿರ್ವಹಿಸಲಿವೆ. 

ADVERTISEMENT

ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ) ಸೇರಿ ವಿವಿಧ ವೈದ್ಯಕೀಯ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿವೆ. ವೈದ್ಯರ ಮೇಲಿನ ಹಲ್ಲೆ ತಡೆಗೆ ಕಠಿಣ ಕಾನೂನು ತಂದು, ವೈದ್ಯಕೀಯ ಸಂಸ್ಥೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಿವೆ.

ಈ ಪ್ರಕರಣ ಖಂಡಿಸಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯಲ್ಲಿನ (ನಿಮ್ಹಾನ್ಸ್‌) ಸ್ಥಾನಿಕ ವೈದ್ಯರು ಐದು ದಿನಗಳಿಂದ ಹೊರ ರೋಗಿ ವಿಭಾಗ ಬಹಿಷ್ಕರಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರದಿಂದ ಒಳರೋಗಿ ವಿಭಾಗ ಸೇವೆ ಸ್ಥಗಿತಗೊಳಿಸುವುದಾಗಿ ನಿಮ್ಹಾನ್ಸ್ ಸ್ಥಾನಿಕ ವೈದ್ಯರ ಸಂಘ ತಿಳಿಸಿದೆ. 

ರೋಗಿಗಳಿಗೆ ಸಮಸ್ಯೆ ಮಾಡುವುದು ನಮ್ಮ ಉದ್ದೇಶವಲ್ಲ. ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮುಷ್ಕರ ನಡೆಸುತ್ತಿದ್ದೇವೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆ ದೊರೆಯಲಿದೆ
ಡಾ.ಎಸ್. ಶ್ರೀನಿವಾಸ್ ಐಎಂಎ ಕರ್ನಾಟಕ ಶಾಖೆ ಅಧ್ಯಕ್ಷ
ಮುಷ್ಕರದ ಉದ್ದೇಶ ಒಳ್ಳೆಯದಿದ್ದರೂ ರೋಗಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚಿಸಲಾಗಿದೆ. ವೈದ್ಯರ ಸುರಕ್ಷತೆ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ರಜೆ ಮಂಜೂರು ಮಾಡದಂತೆ ಸೂಚನೆ
ಬೆಂಗಳೂರು: ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ರಾಜ್ಯದಲ್ಲಿಯೂ ಮುಷ್ಕರ ಹಮ್ಮಿಕೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರಿಗೆ ಶನಿವಾರ ರಜೆ ನೀಡಬಾರದು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರೆಗೆ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಬೆಂಬಲ ಸೂಚಿಸಿದ್ದು, ತುರ್ತು ಸೇವೆ ಹೊರತುಪಡಿಸಿ ಇತರ ಎಲ್ಲ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಆರೋಗ್ಯ ಸಚಿವರಿಗೆ ಪತ್ರ ನೀಡಿದೆ. ಇದರಿಂದಾಗಿ ಸಾರ್ವಜನಿಕ ಆರೋಗ್ಯ ಸೇವೆಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಎಲ್ಲ ಜಿಲ್ಲಾ ಶಸ್ತ್ರಚಿಕಿತ್ಸಕರು, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಿ, ಸಾರ್ವಜನಿಕ ತುರ್ತು ವೈದ್ಯಕೀಯ ಸೇವೆಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮವಹಿಸಬೇಕು ಎಂದು ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.