ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರವೇ ಕಾರ್ಯಕರ್ತರು ಪೊಲೀಸರಿಗೆ ಶರಣಾಗುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಗುರುವಾರ ತಡರಾತ್ರಿ ನಡೆದ ಈ ಬೆಳವಣಿಗೆಯಿಂದ ರಾಜ್ಯದಾದ್ಯಂತ ಆಸ್ಪತ್ರೆಗಳ ಹೊರರೋಗಿ ವಿಭಾಗ (ಒಪಿಡಿ) ಬಂದ್‌ಗೆ ನೀಡಿದ್ದ ಕರೆಯನ್ನು ಶುಕ್ರವಾರ ಬೆಳಿಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಾಪಸ್ ಪಡೆಯುವ ಸಾಧ್ಯತೆ ಇದೆ.
‘ಸದ್ಯಕ್ಕೆ ಒಪಿಡಿ ಬಂದ್ ನಿರ್ಧಾರವನ್ನು ವಾಪಸ್ ಪಡೆಯುವುದಿಲ್ಲ. ಬೆಳಿಗ್ಗೆ ಪ್ರತಿಭಟನಾ ಸ್ಥಳದಲ್ಲಿ ಚರ್ಚಿಸಿ, ನಿರ್ಣಯ ಕೈಗೊಳ್ಳಲಾಗುವುದು. ರೋಗಿಗಳಿಗೆ ತೊಂದರೆ ಆಗಬಾರದುಎನ್ನುವುದು ನಮ್ಮ ಆಶಯವಾಗಿದೆ. ಹಲ್ಲೆ ಮಾಡಿದವರು ಶರಣಾಗತರಾಗಲು ಮುಂದೆ ಬಂದಿರುವುದು ಸ್ವಾಗತಾರ್ಹ. ಆದರೆ, ಪೊಲೀಸರು ಅವರನ್ನು ಬಂಧಿಸುವವರೆಗೂ ನಾವು ಹಿಂದೆ ಸರಿಯುವುದಿಲ್ಲ’ಎಂದು ಐಎಂಎ ರಾಜ್ಯ ಶಾಖೆ ಕಾರ್ಯದರ್ಶಿ ಡಾ.ಎಸ್.ಶ್ರೀನಿವಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಶುಕ್ರವಾರ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದಲ್ಲಿ ಕಿರಿಯ ವೈದ್ಯರು ಪ್ರತಿಭಟನೆಯನ್ನು ಅಂತ್ಯಗೊಳಿಸಲಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.
ಗೊಡ್ಡು ಬೆದರಿಕೆಗೆ ಮಣಿದಿಲ್ಲ: ಕರವೇ ಸ್ಪಷ್ಟನೆ
‘ವೈದ್ಯರು ಮಾಡಿರುವ ಎಡವಟ್ಟುಗಳನ್ನು ಮುಚ್ಚಿ ಹಾಕಲು ಮಾಡುತ್ತಿರುವ ಮುಷ್ಕರವನ್ನುಹಿಂಪಡೆಯಲು ನಾವುಪೊಲೀಸರಿಗೆ ಶರಣಾಗುತ್ತಿದ್ದೇವೆ.ವೈದ್ಯರ ಗೊಡ್ಡು ಬೆದರಿಕೆಗೆ ಮಣಿದಿಲ್ಲ. ಕ್ಷಮೆ ಯಾಚಿಸುವುದಿಲ್ಲ. ನಮ್ಮ ಬಂಧನದಿಂದ ಯಾರೂಅಹಿತಕರ ಘಟನೆಗಳನ್ನು ಮಾಡಬಾರದು’ಎಂದು ಹಲ್ಲೆ ಆರೋಪಿ ಅಶ್ವಿನಿಗೌಡ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.