ಬೆಂಗಳೂರು: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ, ಸರಕು ಸಾಗಣೆ ವಾಹನಗಳ ತಡೆರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡುವ ‘ಸ್ಯಾಟಲೈಟ್ ಟೌನ್ ರಿಂಗ್ ರೋಡ್’ನ (ಎಸ್‌ಟಿಆರ್‌ಆರ್) ಮೊದಲ ಹಂತದ ದೊಡ್ಡಬಳ್ಳಾಪುರ-ಹೊಸಕೋಟೆ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ.
ನ.17ರಿಂದ ಟೋಲ್ ಪಾವತಿ ಆರಂಭಿಸಲಾಗುತ್ತಿದ್ದು, ದೇವನಹಳ್ಳಿ ಬಳಿಯ ನಲ್ಲೂರು ಟೋಲ್ ಪ್ಲಾಜಾದಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಲಘು ವಾಹನಗಳಿಗೆ ₹70 (ಏಕಮುಖ ಸಂಚಾರ) 24 ಗಂಟೆಗಳ ಒಳಗೆ ಒಂದು ಸುತ್ತಿನ ಪ್ರಯಾಣಕ್ಕೆ ₹105, ಬಸ್, ಟ್ರಕ್‌ಗಳು ಕ್ರಮವಾಗಿ ₹240 ಮತ್ತು ₹360 ಪಾವತಿಸಬೇಕಿದೆ. ಈ ದರಗಳು ಬರುವ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತವೆ. ದ್ವಿಚಕ್ರ ವಾಹನಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ನೀಡಲಾಗುವುದು.
ಬೆಂಗಳೂರು ನಗರವನ್ನು ಸುತ್ತುವರೆದಂತೆ ದಾಬಸ್‌ಪೇಟೆಯಿಂದ ರಾಮನಗರದವರೆಗೆ ಸಂಪರ್ಕ ಸೇತುವಾಗಲಿರುವ 288 ಕಿ.ಮೀ ಉದ್ದದ ‘ಸ್ಯಾಟಲೈಟ್ ಟೌನ್ ರಿಂಗ್ ರೋಡ್’ ಇದಾಗಿದೆ. ಈ ರಸ್ತೆ ಪೂರ್ಣಗೊಂಡರೆ ಬೇರೆಬೇರೆ ಪ್ರದೇಶಗಳಿಗೆ ತೆರಳಬೇಕಿರುವ ವಾಣಿಜ್ಯ ವಾಹನಗಳು ಬೆಂಗಳೂರು ನಗರ ಪ್ರವೇಶಿಸದೇ ಹೊರವಲಯದ ಮೂಲಕ ಸಾಗಬಹುದಾಗಿದೆ. ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು, ವಾಹನಗಳು ನಿಗದಿತ ಸ್ಥಳವನ್ನು ತ್ವರಿತವಾಗಿ ತಲುಪಲು ಈ ಮಾರ್ಗ ಅನುಕೂಲ ಕಲ್ಪಿಸುತ್ತದೆ.
₹17 ಸಾವಿರ ಕೋಟಿ ವೆಚ್ಚದ ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 10 ಹಂತಗಳಲ್ಲಿ ಅಭಿವೃದ್ಧಿಪಡಿಸುತ್ತಿದೆ. ಅವುಗಳಲ್ಲಿ ದೊಡ್ಡಬಳ್ಳಾಪುರ-ಹೊಸಕೋಟೆ ಹೊರವಲಯ ರಸ್ತೆ (34.15 ಕಿ.ಮೀ) ಪೂರ್ಣಗೊಂಡಿದೆ ಎಂದು ಎನ್‌ಎಚ್‌ಎಐ ಬೆಂಗಳೂರಿನ ಯೋಜನಾ ನಿರ್ದೇಶಕ ಕೆ.ಬಿ. ಜಯಕುಮಾರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.