ADVERTISEMENT

ನಾಯಿ ಮಾಂಸ ಮಾರಾಟ ಆರೋಪ: ಬಿಗುವಿನ ವಾತಾವರಣ

ಪುನೀತ್ ಕೆರೆಹಳ್ಳಿ ವಶಕ್ಕೆ ಪಡೆದ ಪೊಲೀಸರು: ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಯಿಂದ ಮಾದರಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 19:56 IST
Last Updated 26 ಜುಲೈ 2024, 19:56 IST
ಮಾಂಸದ ಮಾದರಿಯನ್ನು ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದರು 
ಮಾಂಸದ ಮಾದರಿಯನ್ನು ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದರು    

ಬೆಂಗಳೂರು: ‘ನಾಯಿ ಮಾಂಸವನ್ನು ರೈಲಿನ ಮೂಲಕ ನಗರಕ್ಕೆ ತಂದು ಹೋಟೆಲ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಅವರ ನೇತೃತ್ವದ ಗುಂಪೊಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

‘ನಗರಕ್ಕೆ ಬಂದ ಜೈಪುರ–ಮೈಸೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ 120 ಬಾಕ್ಸ್‌ಗಳಲ್ಲಿ 4,500 ಕೆ.ಜಿಯಷ್ಟು ನಾಯಿಯ ಮಾಂಸ ತರಲಾಗಿದೆ. ಇದನ್ನು ಅಬ್ದುಲ್ ರಜಾಕ್ ಮಾಲೀಕತ್ವದ ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ನಿತ್ಯ ನೂರಾರು ಬಾಕ್ಸ್‌ನಲ್ಲಿ ಮಾಂಸ ತರಲಾಗುತ್ತಿದೆ’ ಎಂದು ಪುನೀತ್‌ ಕೆರೆಹಳ್ಳಿ ಆರೋಪಿಸಿದರು. ಅದಾದ ಮೇಲೆ ಸ್ಥಳಕ್ಕೆ ಉದ್ಯಮಿ ಅಬ್ದುಲ್ ರಜಾಕ್ ಬಂದರು. ಆಗ ವಾಗ್ವಾದ ಮತ್ತಷ್ಟು ತೀವ್ರಗೊಂಡಿತು.  

‘ಬಾಕ್ಸ್‌ಗಳಲ್ಲಿ ತಂದಿರುವ ಮಾಂಸವನ್ನು ತೆರೆದು ತೋರಿಸಬೇಕು’ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿ, ವಾಗ್ವಾದ ನಡೆಯಿತು.

ADVERTISEMENT

ಪುನೀತ್ ಆರೋಪವನ್ನು ನಿರಾಕರಿಸಿದ ಅಬ್ದುಲ್ ರಜಾಕ್, ‘ಪುನೀತ್‌ ಹಣ ಕೇಳಲು ಬಂದಿದ್ದರು. ನಯಾಪೈಸೆ ಕೊಡುವುದಿಲ್ಲ ಎಂದು ಹೇಳಿ ಕಳುಹಿಸಿದ್ದೆ. ಅದಕ್ಕೆ ಈ ರೀತಿ ಗಲಾಟೆ ಮಾಡುತ್ತಿದ್ದಾರೆ. ನಾಯಿ ಮಾಂಸವನ್ನು ತಂದಿಲ್ಲ. ಬಾಕ್ಸ್‌ನಲ್ಲಿ ತಂದಿರುವುದು ಕುರಿಯ ಮಾಂಸ. ಪುನೀತ್ ಮಾಡಿರುವ ಆರೋಪ ಸುಳ್ಳು’ ಎಂದು ಹೇಳಿದರು.

‘ನನ್ನ ಬಳಿ ಪರವಾನಗಿ ಇದೆ. 12 ವರ್ಷದಿಂದ ಮಾಂಸದ ವ್ಯಾಪಾರ ಮಾಡುತ್ತಿದ್ದೇನೆ. ನಿಯಮದ ಪ್ರಕಾರವೇ ಹೊರ ರಾಜ್ಯದಿಂದ ಕುರಿ ಮಾಂಸ ತರಿಸಲಾಗಿದೆ. ಯಾರು ಬೇಕಾದರೂ ಪರಿಶೀಲನೆ ನಡೆಸಬಹುದು’ ಎಂದು ರಜಾಕ್ ಹೇಳಿದರು.

ನಂತರ, ಕಾಟನ್‌ಪೇಟೆ ಹಾಗೂ ಉಪ್ಪಾರಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು.

ಮಲ್ಲೇಶ್ವರ ವಲಯದ ಆಹಾರ ಸುರಕ್ಷತೆ ಅಧಿಕಾರಿ ಅಂಬರೀಷ್ ಅವರು ಸ್ಥಳಕ್ಕೆ ಬಂದು ನಾಲ್ಕು ಬಾಕ್ಸ್‌ಗಳಲ್ಲಿದ್ದ ಮಾಂಸದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನೆ ಮಾಡಿದರು.

‘ಪ್ರಯೋಗಾಲಯದ ವರದಿ ಬಂದ ನಂತರ ಯಾವ ಮಾಂಸ ಎಂಬುದು ತಿಳಿಯಲಿದೆ’ ಎಂದು ಅಧಿಕಾರಿಗಳು ಹೇಳಿದರು.

ನಂತರ, ಪುನೀತ್‌ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.