ಬೆಂಗಳೂರು: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಜಯ ಸಾಧಿಸುತ್ತಿದ್ದಂತೆಯೇ ಭಾರತದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹುರುಪು ಕೊಟ್ಟಂತಾಗಿದೆ.
ಡೊನಾಲ್ಡ್ ಅವರ ‘ಟ್ರಂಪ್ ಆರ್ಗೈನೈಜೇಷನ್ ಕಂಪನಿ’ಯಿಂದ ನಡೆಯುವ ರಿಯಲ್ ಎಸ್ಟೇಟ್ ಉದ್ಯಮ ಟ್ರಂಪ್ ಟವರ್ ಭಾರತಕ್ಕೆ ನೇರ ಪ್ರವೇಶ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.
ಬೆಂಗಳೂರು ಸೇರಿದಂತೆ ಭಾರತದ ಆರು ಪ್ರಮುಖ ನಗರಗಳಲ್ಲಿ ಶೀಘ್ರ ಟ್ರಂಪ್ ಟವರ್‌ಗಳು ತಲೆ ಎತ್ತಲಿವೆ ಎಂದು ವರದಿಯಾಗಿದೆ.
ಟ್ರಂಪ್ ಟವರ್‌ಗಳು, ಟ್ರಂಪ್ ಆರ್ಗನೈಸೇಷನ್ ಕಂಪನಿಯಿಂದ ಸ್ಥಾಪನೆಯಾಗುವ ರಿಯಲ್ ಎಸ್ಟೇಟ್ ಕೇಂದ್ರಗಳಾಗಿವೆ. ಸದ್ಯ ಭಾರತದಲ್ಲಿ ಮುಂಬೈ, ಪುಣೆ, ದೆಹಲಿ (ಗುರುಗ್ರಾಮ) ಹಾಗೂ ಕೋಲ್ಕತ್ತದಲ್ಲಿ ಈ ಕೇಂದ್ರಗಳಿವೆ.
ಬೆಂಗಳೂರು, ಹೈದರಾಬಾದ್, ನೋಯ್ಡಾ, ಪುಣೆ, ಮುಂಬೈ, ಗುರುಗ್ರಾಮದಲ್ಲಿ ಹೊಸ ಟ್ರಂಪ್ ಟವರ್‌ಗಳು ತಲೆ ಎತ್ತಲಿವೆ ಎಂದು ಭಾರತದ ಟ್ರಿಬೆಕಾ ರಿಯಲ್ ಎಸ್ಟೇಟ್ ಕಂಪನಿ ಸ್ಥಾಪಕ ಕಲ್ಪೇಶ್ ಮೆಹ್ತಾ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಟ್ರಿಬೆಕಾ ಕಂಪನಿ ಸೇರಿದಂತೆ ಕೆಲ ರಿಯಲ್ ಎಸ್ಟೇಟ್ ಕಂಪನಿಗಳು ಭಾರತದಲ್ಲಿ ಮೂರು ಕಡೆ ಟ್ರಂಪ್ ಟವರ್‌ಗಳನ್ನು ನಿರ್ಮಾಣ ಮಾಡಿದೆ. ಆದರೆ, ಈ ಯೋಜನೆಗಳಲ್ಲಿ ಟ್ರಂಪ್ ಆರ್ಗೈನೈಜೇಷನ್ ನೇರವಾಗಿ ಭಾಗಿಯಾಗಿರಲಿಲ್ಲ ಮತ್ತು ಹಣ ಹೂಡಿರಲಿಲ್ಲ. ಆದರೆ, ಟ್ರಂಪ್ ಟವರ್ ಹೆಸರಿನಲ್ಲಿ ಯೋಜನೆಗಳಿಗೆ ಬೆಂಬಲ ಹಾಗೂ ತಾಂತ್ರಿಕ ಸಹಕಾರ ನೀಡಿತ್ತು ಎನ್ನಲಾಗಿದೆ.
ಟ್ರಿಬೆಕಾ ಕಂಪನಿಯು ಟ್ರಂಪ್ ಆರ್ಗನೈಸೇಷನ್ ಸಹಭಾಗಿತ್ವದಿಂದ ಭಾರತದಲ್ಲಿ ಸುಮಾರು 80 ಲಕ್ಷ ಚದರ ಅಡಿಯ ಆರು ಯೋಜನೆಗಳನ್ನು ಅಂತಿಮಗೊಳಿಸಿದೆ. ಡಿಸೆಂಬರ್‌ನಲ್ಲಿ ಇದು ಅಂತಿಮ ಹಂತಕ್ಕೆ ಬರದಲಿದೆ. ಮುಂದಿನ ವರ್ಷ ಜೂನ್ ಅಥವಾ ಜುಲೈ ಸಮಯದಲ್ಲಿ ಭಾರತಕ್ಕೆ ಬರಲಿರುವ ಟ್ರಂಪ್ ಕಂಪನಿಯ ಮುಖ್ಯಸ್ಥರು ಈ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕಲ್ಪೇಶ್ ಮೆಹ್ತಾ ಹೇಳಿದ್ದಾರೆ.
ಟ್ರಂಪ್ ಟವರ್ ಹೆಸರಿನಲ್ಲಿ ಐಷಾರಾಮಿ ವಿಲ್ಲಾ, ಜಾಗತಿಕ ಮಟ್ಟದ ಅಪಾರ್ಟ್‌ಮೆಂಟ್‌ಗಳು, ಶಾಪಿಂಗ್ ಮಾಲ್, ಕಮರ್ಷಿಯಲ್ ಕಾಂಪ್ಲೆಕ್ಸ್, ಆಫೀಸ್ ಸ್ಪೇಸ್, ಗಾಲ್ಪ್ ಕೋರ್ಸ್‌ಗಳನ್ನು ಟ್ರಂಪ್ ಆರ್ಗೈನೈಜೇಷನ್ ನಿರ್ಮಾಣ ಮಾಡುತ್ತದೆ.
1927 ರಲ್ಲಿ ಡೊನಾಲ್ಡ್ ಟ್ರಂಪ್ ಅವರ ತಂದೆ ಫ್ರೆಡ್ ಟ್ರಂಪ್ ಅವರು ಟ್ರಂಪ್ ಆರ್ಗನೈಸೇಷನ್ ಕಂಪನಿ ಸ್ಥಾಪಿಸಿದ್ದರು. ಇದರ ವಾರ್ಷಿಕ ನಿವ್ವಳ ಆದಾಯ ₹5,058 ಕೋಟಿ. ಸದ್ಯ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ಇದರ ಮುಖ್ಯಸ್ಥ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.