ADVERTISEMENT

ಗೊಟ್ಟಿಗೆರೆ ಕೆರೆಗೆ ಕೊಳಚೆ ನೀರು ಬಿಡಬೇಡಿ: ಉಪ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 23:59 IST
Last Updated 19 ಸೆಪ್ಟೆಂಬರ್ 2024, 23:59 IST
<div class="paragraphs"><p> ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ‌</p></div>

ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ‌

   

ಬೆಂಗಳೂರು: ‘ನಗರದ ಗೊಟ್ಟಿಗೆರೆ ಕೆರೆಗೆ ಕೊಳಚೆ ನೀರು ಬಿಡುವುದನ್ನು ಶಾಶ್ವತವಾಗಿ ನಿಲ್ಲಿಸಬೇಕು ಮತ್ತು ಈ ಸಂಬಂಧ ತೆಗೆದುಕೊಂಡ ಕ್ರಮದ ಬಗ್ಗೆ 15 ದಿನಗಳಲ್ಲಿ ವರದಿ ನೀಡಿ’ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರು ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕೆರೆಗೆ ಕೊಳಚೆ ನೀರು ಬಿಡಲಾಗುತ್ತಿದೆ ಮತ್ತು ಕೆರೆಯ ಅಂಗಳವನ್ನು ತ್ಯಾಜ್ಯ ವಿಲೇವಾರಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಗೊಟ್ಟಿಗೆರೆಯ ನಂದಿನಿ ರಿಟ್ರೀಟ್‌ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಂಘವು ನೀಡಿದ್ದ ದೂರಿನ ಸಂಬಂಧ ಈ ಆದೇಶ ಹೊರಡಿಸಲಾಗಿದೆ.

ADVERTISEMENT

ತನಿಖೆಯ ಭಾಗವಾಗಿ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ.ವೀರಪ್ಪ ಅವರು ಇದೇ 13ರಂದು ಗೊಟ್ಟಿಗೆರೆ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕೆರೆಯಲ್ಲಿ ಕೊಳಚೆ ನೀರು ನಿಂತಿರುವುದು, ಅಂಗಳದಲ್ಲಿ ತ್ಯಾಜ್ಯ ಸಂಗ್ರಹಿಸಿರುವುದು, ಕೆರೆಗೆ ಪೂರ್ಣ ಬೇಲಿ ಇಲ್ಲದಿರುವುದು ಮತ್ತು ಕೆರೆಯ ಏರಿಯನ್ನು ಖಾಸಗಿ ವ್ಯಕ್ತಿಗಳು ಸಂಚಾರಕ್ಕೆ ಬಳಸುತ್ತಿರುವುದು ಪತ್ತೆಯಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಉಪ ಲೋಕಾಯುಕ್ತರು, ‘ಕೊಳಚೆ ನೀರು ಬರುವುದನ್ನು ನಿಲ್ಲಿಸಲು ಶಾಶ್ವತ ಪರಿಹಾರ ಕಲ್ಪಿಸಿ. ತ್ಯಾಜ್ಯ ವಿಲೇವಾರಿ ಚಟುವಟಿಕೆ ನಿಲ್ಲಿಸಿ. ಜತೆಗೆ ಕೆರೆ ಅಭಿವೃದ್ಧಿಗೆ ಮಂಜೂರಾಗಿರುವ ಅನುದಾನ, ಬಳಕೆಯಾದ ಹಣ ಮತ್ತು ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು ಸೆಪ್ಟೆಂಬರ್‌ 30ರ ಒಳಗೆ ಸಲ್ಲಿಸಿ’ ಎಂದು ಬಿಬಿಎಂಪಿ ಕೆರೆ ವಿಭಾಗದ ಕಾರ್ಯನಿರ್ವಾಹಕಾ ಎಂಜಿನಿಯರ್‌ ಇಂದ್ರಾಣಿ, ಸಹಾಯಕ ಕಾರ್ಯನಿರ್ವಹಣಾ ಎಂಜಿನಿಯರ್‌ ಉಷಾ ಮತ್ತು ಜಲಮಂಡಳಿ ಕಾರ್ಯನಿರ್ವಾಹಕಾ ಎಂಜಿನಿಯರ್‌ ಪ್ರದೀಪ್‌ ಅವರಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.