ಬೆಂಗಳೂರು: ‘ಪರಿಹಾರ ಧನ ಸಿಕ್ಕಿದೆ ಎಂದು ಗೊತ್ತಾದರೆ ಕೆಲವರು ಶೇ 10–15 ಬಡ್ಡಿ ಕೊಡುತ್ತೇವೆ ಎಂದು ಬರುತ್ತಾರೆ. ಯಾಮಾರಿದರೆ ಹಣ ಕಳೆದುಕೊಳ್ಳುತ್ತೀರಿ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಎಸ್‌ಆರ್‌ಟಿಸಿ ನೌಕರರ ಕುಟುಂಬಗಳಿಗೆ ಎಚ್ಚರಿಸಿದರು.
ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ತಲಾ ₹ 1 ಕೋಟಿ, ಅನಾರೋಗ್ಯದಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 10 ಲಕ್ಷ ಪರಿಹಾರವನ್ನು ಬುಧವಾರ ನಡೆದ ಕೆಎಸ್‌ಆರ್‌ಟಿಸಿ 63ನೇ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ವಿತರಿಸಿ ಅವರು ಮಾತನಾಡಿದರು.
‘ಪರಿಹಾರದ ಹಣವನ್ನು ಮನೆ ಕಟ್ಟಲು, ಮಕ್ಕಳ ಭವಿಷ್ಯಕ್ಕೆ ಬಳಸಿ, ಇಲ್ಲವೇ ಬ್ಯಾಂಕ್‌ನಲ್ಲಿಡಿ. ಬೇರೆಯವರ ಕೈಗೆ ನೀಡಿದರೆ ವಾಪಸ್ ಬರುವುದಿಲ್ಲ’ ಎಂದು ಸಲಹೆ ಮಾಡಿದರು.
‘ಕೆಎಸ್‌ಆರ್‌ಟಿಸಿಯಲ್ಲಿ 1,200, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಆರ್‌ಟಿಸಿಯಲ್ಲಿ 300 ಬಸ್ ಸೇರಿ ಇಲ್ಲಿಯವರೆಗೆ 1,500 ಬಸ್‌ಗಳನ್ನು ತಲಾ ₹ 4 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಿದೆ. ದರಿಂದ ಬಸ್‌ಗಳ ಕೊರತೆ ಸಮಸ್ಯೆ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.
‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಾಲ್ಕು ನಿಗಮಗಳಲ್ಲಿ 1,000 ಜನರಿಗೆ ಅನುಕಂಪ ಆಧಾರಿತ ಉದ್ಯೋಗ ನೀಡಲಾಗಿದೆ. ಈಗ ಸುಮಾರು 9,000 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆಯುತ್ತಿದೆ‘ ಎಂದು ವಿವರಿಸಿದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾತನಾಡಿ, ‘ಅಪಘಾತದಲ್ಲಿ ಮೃತಪಟ್ಟ ಮೂವರು ಸಿಬ್ಬಂದಿ ಕುಟುಂಬಕ್ಕೆ ತಲಾ ₹ 1 ಕೋಟಿ ಪರಿಹಾರ ನೀಡಲಾಗಿದೆ. ಈವರೆಗೆ 20 ಕುಟುಂಬಗಳಿಗೆ ಹೀಗೆ ಪರಿಹಾರ ನೀಡಲಾಗಿದೆ. ಈವರೆಗೆ ಇತರೆ ಕಾರಣದಿಂದ ಮೃತಪಟ್ಟ 93 ನೌಕರರ ಕುಟುಂಬಗಳಿಗೆ ತಲಾ ₹ 10 ಲಕ್ಷ ವಿತರಿಸಲಾಗಿದೆ’ ಎಂದರು.
ಪುನಶ್ಚೇತನಗೊಂಡ ಐರಾವತ ಕ್ಲಬ್ ಕ್ಲಾಸ್ ಬಸ್‌ಗಳಿಗೆ ಚಾಲನೆ ನೀಡಲಾಯಿತು. ಅನುಕಂಪದ ಆಧಾರದಲ್ಲಿ ನೇಮಕಗೊಂಡವರಿಗೆ ನೇಮಕಾತಿ ಆದೇಶ ನೀಡಲಾಯಿತು. ಶೂನ್ಯ ಅಪಘಾತದ ಸಾಧನೆ ಮಾಡಿದ ಘಟಕಗಳನ್ನು ಗೌರವಿಸಲಾಯಿತು. ಬಸ್ ಪುನಶ್ಚೇತನಗೊಳಿಸಿದ ಕಾರ್ಯಾಗಾರದ ನೌಕರರನ್ನು ಸನ್ಮಾನಿಸಲಾಯಿತು.
ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಂಸ್ಥೆಯ ನಿರ್ದೇಶಕಿ ನಂದಿನಿದೇವಿ ಕೆ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.