ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡಬಾರದು. ಆದಷ್ಟು ಬೇಗ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಅವರು, '2006ರ ನ. 24 ರಿಂದ 2010ರ ಏಪ್ರಿಲ್ 22ರವರೆಗೆ ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಇರಲಿಲ್ಲ. ಬಿಬಿಎಂಪಿಗೆ 7 ನಗರಸಭೆ ಹಾಗೂ 110 ಹಳ್ಳಿಗಳ ಸೇರ್ಪಡೆ ಸಲುವಾಗಿ ಚುನಾವಣೆ ನಡೆಸಲು ಮೀನಾಮೇಷ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣೆ ನಡೆದಿತ್ತು. 198 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆ ಸಮಸ್ಯೆಗಳಿವೆ. ಈಗ ಮತ್ತೆ 60 ಹಳ್ಳಿಗಳ ಸೆರ್ಪಡೆ ಮಾಡಲು ಸರ್ಕಾರ ಹೊರಟಿದೆ. ಮತ್ತೆ ಚುನಾವಣೆ ಮುಂದೂಡುವ ತಂತ್ರವಿದು ಎಂದು ದೂರಿದರು.
ಹೊಸದಾಗಿ 27 ವಾರ್ಡ್‌ಗಳನ್ನು ಸೇರ್ಪಡೆ ಗೊಳಿಸುವುದು ಮತ್ತು ಬಿಬಿಎಂಪಿ ಮಸೂದೆಯನ್ನು ಜಂಟಿ ಸಲಹಾ ಸಮಿತಿ ಪರಿಶೀಲನೆಗೆ ಒಳಪಡಿಸಲು ಕಾಲಾವಕಾಶ ಕೇಳುವುದು ಚುನಾವಣೆ ಮುಂದೂಡಲು ಸರ್ಕಾರ ಅನುಸರಿಸುತ್ತಿರುವ ಕಾರ್ಯತಂತ್ರದ ಭಾಗ ಎಂದು ಅವರು ಆರೋಪಿಸಿದರು.
'ಈಗಾಗಲೇ 198 ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗಿದೆ. ನ. 30ಕ್ಕೆ ಮತದಾರರ ಪರಿಷ್ಕೃತ ಪಟ್ಟಿಯೂ ಸಿದ್ದವಾಗಲಿದೆ. ಮೀಸಲಾತಿ ಮಾಡಲು ಒಂದು ವಾರ ಸಮಯ ಸಾಕು. ಇದಾದ ತಕ್ಷಣ ಚುನಾವಣೆ ನಡೆಸಬಹುದು' ಎಂದು ಅಭಿಪ್ರಾಯ ಪಟ್ಟರು.
'ಈ ಹಿಂದೆಯೂ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 3 ವರ್ಷ ಆಡಳಿತಾಧಿಕಾರಿ ನೇಮಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಮತದಾರರಿಗೆ ವಂಚನೆ ಮಾಡಲಾಗಿತ್ತು'.'ಚುನಾವಣೆಯನ್ನು ಸಕಾಲದಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದಶನ ನೀಡಬೇಕು ಎಂದು ಹೈಕೋರ್ಟ್ ಮೊರೆ ಹೋಗುತ್ತೇವೆ' ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.