ADVERTISEMENT

ಆರೋಗ್ಯ ಹಾಳಾಗುವಷ್ಟು ಒತ್ತಡ ಬೇಡ: ಸಚಿವ ದಿನೇಶ್‌ ಗುಂಡೂರಾವ್‌

‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಉದ್ಘಾಟಿಸಿದ ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:11 IST
Last Updated 28 ಅಕ್ಟೋಬರ್ 2024, 16:11 IST
‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯಲ್ಲಿ ಭಾಗವಹಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರನ್ನು ಗೌರವಿಸಲಾಯಿತು
‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯಲ್ಲಿ ಭಾಗವಹಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಅವರನ್ನು ಗೌರವಿಸಲಾಯಿತು   

ಬೆಂಗಳೂರು: ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳ ಆರೋಗ್ಯ ಹಾಳಾಗುವಷ್ಟು ಒತ್ತಡ ಉಂಟು ಮಾಡಬಾರದು. ಉದ್ಯೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಉದ್ಯೋಗಿಗಳು ಹಲವು ಹಂತಗಳಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಪ್ರತಿಯೊಂದು ಸಂಸ್ಥೆಯೂ ತನ್ನ ಉದ್ಯೋಗಿಯ ಮಾನಸಿಕ ಸ್ಥಿತಿಯನ್ನು ಗುರುತಿಸಬೇಕು. ಹೆಚ್ಚಿನ ಒತ್ತಡ ಹೇರದೆ ಗಂಭೀರ ಪರಿಣಾಮಕ್ಕೆ ವ್ಯಕ್ತಿ ತುತ್ತಾಗುವುದನ್ನು ತಡೆಯಬೇಕು. ಅವರ ಕೆಲಸದ ಒತ್ತಡ ಗಮನಿಸಿ ತಮ್ಮ ಸಮಸ್ಯೆ ಹೇಳಿಕೊಳ್ಳುವ, ಪರಿಹಾರ ಕಂಡುಕೊಳ್ಳುವ ಸೌಲಭ್ಯ ಒದಗಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಈಚೆಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ಸಂವಹನದ ತೊಡಕಿನಿಂದ ಮಾನಸಿಕ ಸಮಸ್ಯೆ ಹೆಚ್ಚಾಗುತ್ತಿದೆ. ಮಾನಸಿಕ ಸಮಸ್ಯೆ ಮುಜುಗರ, ಅವಮಾನದ ವಿಚಾರವಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುವುದು ಅಗತ್ಯ ಎಂದರು.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ‘ದೈಹಿಕ ಬಾಧೆಗಳನ್ನು ಮೀರಿ ಮಾನಸಿಕ ಸಮಸ್ಯೆಯೇ ಮೊದಲ ಸ್ಥಾನ ಪಡೆಯುತ್ತಿದೆ. ಮೊಬೈಲ್‌ನ ವಿಪರೀತ ಬಳಕೆ ಕೂಡ ಮಾನಸಿಕ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಭಾರತದಲ್ಲಿ ಶೇ 17ರಷ್ಟು ಮಾನಸಿಕ ಆರೋಗ್ಯದ ಸಮಸ್ಯೆ ಕಂಡು ಬಂದಿದೆ. ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಶೇ 3ರಷ್ಟು ಹೆಚ್ಚು ಸಮಸ್ಯೆ  ಇದೆ’ ಎಂದು ಅಂಕಿ ಅಂಶ ನೀಡಿದರು. 

ಮನೋವಿಜ್ಞಾನಿ ಡಾ.ಎ. ಜಗದೀಶ್ ವಿಶೇಷ ಉಪನ್ಯಾಸ ನೀಡಿದರು. ಶಾಸಕ ಬಿ. ಉದಯ್ ಗರುಡಾಚಾರ್, ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್, ಬಿಎಂಸಿಆರ್‌ಐ ನಿರ್ದೇಶಕಿ ಡಾ.ಎಂ.ಜಿ. ತ್ರಿವೇಣಿ, ಪ್ರಾಧಿಕಾರದ ಉಪ ನಿರ್ದೇಶಕಿ ಡಾ.ಪಿ. ರಜನಿ ಭಾಗವಹಿಸಿದ್ದರು.

‘ಟೆಲಿ ಮನಸ್: ದೇಶಕ್ಕೆ ಮಾದರಿ’ ‘ಮಾನಸಿಕ ಆರೋಗ್ಯ ವಿಚಾರದಲ್ಲಿ ರಾಜ್ಯವು ದೇಶಕ್ಕೆ ಮಾದರಿಯಾಗಿದೆ. ಅಧಿಕ ಜನ ಸೇರುವ ದರ್ಗಾ ದೇವಸ್ಥಾನ ಚರ್ಚ್‌ಗಳಲ್ಲೂ ಮಾನಸಿಗ ಆರೋಗ್ಯದ ಚಿಕಿತ್ಸೆ ಸಲಹೆಯನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಟೆಲಿ ಮನಸ್ ಮೂಲಕ ಸಮಸ್ಯೆಯುಳ್ಳವರಿಗೆ ನೇರವಾಗಿ ಕೌನ್ಸೆಲಿಂಗ್‌ ಮಾಡುವ ವ್ಯವಸ್ಥೆ ನಮ್ಮಲ್ಲಿದೆ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.