ರಾಗಿಗುಡ್ಡ–ಸೆಂಟ್ರಲ್ ಸಿಲ್ಕ್ ಬೋರ್ಡ್ ಡಬಲ್ ಡೆಕರ್ ರಸ್ತೆಯಲ್ಲಿ ಬುಧವಾರ ಪ್ರಾಯೋಗಿಕ ಸಂಚಾರ ಆರಂಭಗೊಂಡಿತು
–ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.
ಬೆಂಗಳೂರು: ರಾಗಿಗುಡ್ಡ–ಸೆಂಟ್ರಲ್ ಸಿಲ್ಕ್ ಬೋರ್ಡ್ ಮೆಟ್ರೊ ಮಾರ್ಗದಲ್ಲಿ ‘ಡಬಲ್ ಡೆಕರ್’ ಮೇಲ್ಸೇತುವೆಯಲ್ಲಿ ಪ್ರಾಯೋಗಿಕ ವಾಹನ ಸಂಚಾರ ಬುಧವಾರ ಆರಂಭಗೊಂಡಿತು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಸತೀಶ್ ರೆಡ್ಡಿಯವರನ್ನು ಕೂರಿಸಿಕೊಂಡು ಕಾರು ಚಲಾಯಿಸಿ. ರಸ್ತೆಯಲ್ಲಿ ಸಂಚಾರಕ್ಕೆ ಚಾಲನೆ ನೀಡಿದರು.
ರೋಡ್ ಕಂ ರೈಲ್ (ಡಬಲ್ ಡೆಕರ್) ಮೇಲ್ಸೇತುವೆ ಯೋಜನೆಯು ₹ 449 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ರಾಗಿಗುಡ್ಡದಿಂದ ಕೇಂದ್ರ ರೇಷ್ಮೆ ಮಂಡಳಿವರೆಗಿನ ಕಾಮಗಾರಿ ಪೂರ್ಣಗೊಂಡಿದೆ. ಸದ್ಯ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಿಯಾದರೂ ಲೋಪ ಕಂಡುಬಂದರೆ ವಾಹನ ಸಂಚಾರ ಸ್ಥಗಿತಗೊಳಿಸಿ, ಸಮಸ್ಯೆ ಸರಿಪಡಿಸಲಾಗುವುದು. ಮುಂದೆ ಅಧಿಕೃತವಾಗಿ ಉದ್ಘಾಟನೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
‘ಸಿಲ್ಕ್ ಬೋರ್ಡ್ ಸುತ್ತಮುತ್ತ ವಾಹನದಟ್ಟಣೆಯನ್ನು ಕಡಿಮೆ ಮಾಡಲು ರಾಮಲಿಂಗಾರೆಡ್ಡಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಸಮಯದಲ್ಲಿ ಬಿಎಂಆರ್‌ಸಿಎಲ್‌ನ ಆಗಿನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಜೊತೆಗೆ ಚರ್ಚಿಸಿ ಡಬಲ್ ಡೆಕರ್ ಯೋಜನೆ ರೂಪಿಸಿದ್ದರು. ಇದು ಮಾದರಿಯಾದ ಯೋಜನೆಯಾಗಿದೆ’ ಎಂದು ಶ್ಲಾಘಿಸಿದರು.
ರಾಗಿಗುಡ್ಡದಿಂದ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆಯನ್ನು ತಲುಪಲು ಈ ಮೇಲ್ಸೇತುವೆ ಮೇಲೆ ಸಂಚರಿಸುವ ವಾಹನಗಳಿಗೆ ಯಾವುದೇ ಸಿಗ್ನಲ್‌ಗಳು ಇರುವುದಿಲ್ಲ. ಹಾಗಾಗಿ ವೇಗವಾಗಿ ಸಂಚರಿಸಲು ಸಾಧ್ಯ ಎಂದು ವಿವರಿಸಿದರು.
ಕೆ.ಆರ್.ಪುರ ಮತ್ತು ಹೊಸೂರು ರಸ್ತೆ ಕಡೆಗೆ ಹೋಗುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ ಎಂದು ತಿಳಿಸಿದರು.
3.36 ಕಿ.ಮೀ: ರಸ್ತೆ ಮೇಲ್ಸೇತುವೆ 3.36 ಕಿಲೋಮೀಟರ್ ಉದ್ದ ಇದೆ. ರ‍್ಯಾಂಪ್ ಎ. 1.10 ಕಿ.ಮೀ, ರ‍್ಯಾಂಪ್ ಬಿ. 280 ಮೀಟರ್, ರ‍್ಯಾಂಪ್ ಸಿ. 490 ಮೀಟರ್, ರ‍್ಯಾಂಪ್ ಡಿ. 1.14 ಕಿ.ಮೀ. ಹಾಗೂ ರ‍್ಯಾಂಪ್ ಇ. 230 ಮೀಟರ್ ಉದ್ದವಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್‌ವರೆಗೆ ಲೂಪ್ ಮತ್ತು ಇಳಿಜಾರುಗಳೊಂದಿಗೆ ಮೇಲ್ಸೇತುವೆ ನಿರ್ಮಾಣಗೊಂಡಿದೆ. ರಾಗಿಗುಡ್ಡ ಕಡೆಗೆ 1.37 ಕಿ.ಮೀ. ಮೇಲ್ಸೇತುವೆ ಕಾಮಗಾರಿ ನಿರ್ಮಾಣಗೊಳ್ಳುತ್ತಿದೆ. 2025ರ ಜೂನ್ ವೇಳೆಗೆ ಈ ರಸ್ತೆಯಲ್ಲಿಯೂ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಡಿಸೆಂಬರ್‌ನಲ್ಲಿ ಮೆಟ್ರೊ ಸಂಚಾರ ಆರಂಭಗೊಳ್ಳಲಿದೆ ಎಂದರು.
ಶಾಸಕ ಸಿ.ಕೆ. ರಾಮಮೂರ್ತಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಉಪಸ್ಥಿತರಿದ್ದರು.
100 ಕಿ.ಮೀ. ಡಬಲ್ ಡೆಕರ್ ರಸ್ತೆಗೆ ಚಿಂತನೆ
ರಾಗಿಗುಡ್ಡ–ಸಿಲ್ಕ್‌ಬೋರ್ಡ್ ಡಬಲ್ ಡೆಕರ್ ಮಾದರಿಯಲ್ಲಿಯೇ ನಗರದಲ್ಲಿ 100 ಕಿ.ಮೀ.ನಷ್ಟು ಟ್ರಾಫಿಕ್ ಸಿಗ್ನಲ್ ಮುಕ್ತ ರಸ್ತೆ ನಿರ್ಮಾಣ ಮಾಡುವ ಚಿಂತನೆ ಇದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ‘ಈಗಾಗಲೇ ಯೋಜನೆ ಆರಂಭವಾಗಿ ಪಿಲ್ಲರ್ ಹಾಕಿರುವ ಮೆಟ್ರೊ ಮಾರ್ಗಗಳನ್ನು ಹೊರತುಪಡಿಸಿ ಮುಂದೆ ನಿರ್ಮಾಣಗೊಳ್ಳಲಿರುವ ಎಲ್ಲ ಮೆಟ್ರೊ ಮಾರ್ಗಗಳಲ್ಲಿ ಡಬಲ್ ಡೆಕರ್ ಯೋಜನೆ ಜಾರಿಗೆ ತರಲಾಗುವುದು. ವಾಹನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಟ್ರಾಫಿಕ್ ಸಿಗ್ನಲ್ ಮುಕ್ತ ರಸ್ತೆ ಮಾಡಲಾಗುವುದು. ಪ್ರತಿ ಕಿಲೋಮೀಟರ್‌ಗೆ ₹ 150 ಕೋಟಿ ವೆಚ್ಚವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹಂತಹಂತವಾಗಿ ಈ ಯೋಜನೆ ಜಾರಿಗೆ ತರಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.