ADVERTISEMENT

ಕಾವೇರಿ ಆರನೇ ಹಂತಕ್ಕೆ ಡಿಪಿಆರ್‌ ಸಿದ್ಧ: ಡಿ.ಕೆ. ಶಿವಕುಮಾರ್‌

ರಾಜಧಾನಿಗೆ ಹಂಚಿಕೆಯಾಗಿರುವ ನೀರಿನ ಪೂರ್ಣ ಬಳಕೆಗೆ ಯೋಜನೆ –ಡಿಸಿಎಂ ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 22:01 IST
Last Updated 15 ಅಕ್ಟೋಬರ್ 2024, 22:01 IST
ಕಾವೇರಿ ಐದನೇ ಹಂತದ ಯೋಜನೆಯಡಿ ನೀರು ಪೂರೈಕೆ ಉದ್ಘಾಟನೆಗೆ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿಯಲ್ಲಿ ನಡೆದಿರುವ ಸಿದ್ಧತೆ
ಕಾವೇರಿ ಐದನೇ ಹಂತದ ಯೋಜನೆಯಡಿ ನೀರು ಪೂರೈಕೆ ಉದ್ಘಾಟನೆಗೆ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿಯಲ್ಲಿ ನಡೆದಿರುವ ಸಿದ್ಧತೆ   

ಬೆಂಗಳೂರು: ‘ರಾಜಧಾನಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈಗ ಕಾವೇರಿ 6ನೇ ಹಂತದ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಕಾವೇರಿ ಐದನೇ ಹಂತದ ಯೋಜನೆಯಡಿ ನೀರು ಪೂರೈಕೆಗೆ ಬುಧವಾರ ಚಾಲನೆ ನೀಡುತ್ತಿರುವುದರ ಪ್ರಯುಕ್ತ ಅವರು ‘ಪ್ರಜಾವಾಣಿ’ ಜೊತೆ ಮಂಗಳವಾರ ಮಾತನಾಡಿದರು.

‘ಬೆಂಗಳೂರು ನಗರಕ್ಕೆ ಹಂಚಿಕೆಯಾಗಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವುದಕ್ಕೆ ಯೋಜನೆ ರೂಪಿಸಿದ್ದೇವೆ. ಜಲಮಂಡಳಿ ಡಿಪಿಆರ್‌ ಪರಿಶೀಲಿಸುತ್ತಿದೆ’ ಎಂದು ತಿಳಿಸಿದರು. 

ADVERTISEMENT

ಐದನೇ ಹಂತದ ಯೋಜನೆಯಡಿ ನಗರಕ್ಕೆ ನಿತ್ಯವೂ 775 ಕೋಟಿ ಲೀಟರ್‌ ನೀರು ಪೂರೈಕೆಯಾಗಲಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿರುವ 110 ಹಳ್ಳಿಗಳಿಗೆ ಇದರಿಂದ ಅನುಕೂಲವಾಗಲಿದೆ. ಏಳು ವಿಧಾನಸಭಾ ಕ್ಷೇತ್ರಗಳಿಗೆ ಕಾವೇರಿ ಐದನೇ ಹಂತದ ಯೋಜನೆಯಿಂದ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ವಿವರಿಸಿದರು.

‘ಈವರೆಗೆ ನಿತ್ಯ 1,500 ಕೋಟಿ ಲೀಟರ್‌ ಕಾವೇರಿ ನೀರು ನಗರಕ್ಕೆ ಪೂರೈಕೆಯಾಗುತ್ತಿತ್ತು. ಇನ್ನು ಮುಂದೆ ಪ್ರತಿ ದಿನ 2,225 ಕೋಟಿ ಲೀಟರ್‌ ನೀರು ಪೂರೈಕೆಯಾಗಲಿದೆ. ಇದರಿಂದ ಭವಿಷ್ಯದ ಹತ್ತು ವರ್ಷಗಳ ಕುಡಿಯುವ ನೀರಿನ ಅಗತ್ಯವನ್ನು ನಿಭಾಯಿಸುವುದು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

‘ಐದನೇ ಹಂತದಲ್ಲಿ ನೀರಿನ ಸೋರಿಕೆ ತಡೆಗೆ ಸ್ಕಾಡಾ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ ಎರಡು ದಿನ ಕಾರ್ಯಕ್ರಮ ಆಯೋಜಿಸಲಾಗುವುದು. ಅಲ್ಲಿಯೇ ಸಹಾಯ ಕೇಂದ್ರ ತೆರೆದು, ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು.

ಕಾವೇರಿ ಕಣಿವೆಯಲ್ಲಿ ಹಂಚಿಕೆಯಾಗದೇ ಉಳಿದಿದ್ದ 6 ಟಿಎಂಸಿ ಅಡಿ ನೀರನ್ನು ಬೆಂಗಳೂರು ನಗರಕ್ಕೆ ಹಂಚಿಕೆ ಮಾಡಲಾಗಿದೆ. ಅದೂ ಸೇರಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಆಧರಿಸಿ ಮುಂದಿನ ಯೋಜನೆಯನ್ನು ರೂಪಿಸಲಾಗುವುದು. ಈಗಾಗಲೇ ಅಳವಡಿಸಿರುವ ಕೊಳವೆಗಳ ಪಕ್ಕದಲ್ಲೇ  ಹೊಸ ಕೊಳವೆ ಅಳವಡಿಸುವುದೂ ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ ಎಂದು ತಿಳಿಸಿದರು.

ಕೆರೆಗಳ ನೀರಿನ ಬಳಕೆಗೆ ಯೋಜನೆ:

ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳ ನೀರನ್ನು ಕಟ್ಟಡ ನಿರ್ಮಾಣ, ಇತರ ಉದ್ದೇಶಗಳಿಗೆ ಬಳಸುವ ಯೋಚನೆ ಇದೆ. ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಲಾಗುವುದು. ಐದನೇ ಹಂತದಲ್ಲಿ ಪೂರೈಕೆಯಾಗುವ ನೀರಿನ ಪ್ರಮಾಣ ಆಧರಿಸಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಸಂಸ್ಕರಿಸಿದ ನೀರಿನ ಬಳಕೆಯನ್ನೂ ಹೆಚ್ಚಿಸಲಾಗುವುದು ಎಂದು ವಿವರಿಸಿದರು.

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಳ್ಳುವುದಕ್ಕೂ ಯೋಜನೆ ಸಿದ್ಧವಾಗಿದೆ. ಎತ್ತಿನಹೊಳೆ ಯೋಜನೆಯಿಂದ ಅಲ್ಲಿಗೆ 2.5 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ಯೋಜನೆಯೂ ತಯಾರಾಗುತ್ತಿದೆ ಎಂದರು.

ಬಿಲ್‌ ಪಾವತಿಸದಿದ್ದರೆ ಕ್ರಮ:

‘ಜಲಮಂಡಳಿ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ನೀರಿನ ಬಿಲ್‌ ಬಾಕಿ ಪಾವತಿಸದೇ ಇರುವವರಿಗೆ ನೋಟಿಸ್‌ ಜಾರಿಗೊಳಿಸಲಾಗುವುದು. ನಿಗದಿತ ಗಡುವಿನೊಳಗೆ ಬಿಲ್‌ ಪಾವತಿಸದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ದೃಢವಾದ ಪ್ರಯತ್ನದಿಂದ ಯಶಸ್ಸು’

‘ಕಾವೇರಿ ಐದನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಹಲವು ಅಡೆತಡೆಗಳಿದ್ದವು. ನಾನು ಬೆಂಗಳೂರು ಅಭಿವೃದ್ಧಿ ಸಚಿವನಾದ ಬಳಿಕ ಸಮಸ್ಯೆಗಳಿರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿದೆ. ಸಮಸ್ಯೆ ಅರಿತು ಪರಿಹಾರಕ್ಕೆ ದೃಢವಾದ ಪ್ರಯತ್ನ ಮಾಡಿದೆ. ಆದ್ದರಿಂದ ಬೇಗ ಕಾಮಗಾರಿ ಪೂರ್ಣಗೊಳಿಸುವುದು ಸಾಧ್ಯವಾಯಿತು’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ‘ಮೇಕೆದಾಟು ಸಮಾನಾಂತರ ಜಲಾಶಯ ನಿರ್ಮಾಣ ನನ್ನ ಕನಸು. ನ್ಯಾಯಾಲಯದಲ್ಲಿ ರಾಜ್ಯಕ್ಕೆ ನ್ಯಾಯ ದೊರಕುವ ವಿಶ್ವಾಸವಿದೆ’ ಎಂದರು.

ಇಂದು ‘ಕಾವೇರಿ 5ನೇ ಹಂತ’ ಲೋಕಾರ್ಪಣೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಬುಧವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಟಿ.ಕೆ.ಹಳ್ಳಿಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕೇಂದ್ರ/ರಾಜ್ಯ ಸಚಿವರು ಹಾಗೂ ಸಂಸದರು ಶಾಸಕರು ಹಾಗೂ ಎಲ್ಲ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಯೋಜನೆಗೆ ಆರ್ಥಿಕ ಸಹಕಾರ ನೀಡಿರುವ ಜೈಕಾ ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೇಕುಚಿ ಟಕುರೋ ಕೌನ್ಸಲ್ ಜನರಲ್ ಆಫ್ ಜಪಾನ್ ಇನ್ ಇಂಡಿಯಾದ ಟ್ಸುಟೋಮು ಭಾರತದಲ್ಲಿರುವ ಜಪಾನ್ ರಾಯಭಾರ ಕಚೇರಿಯ ಆರ್ಥಿಕ ಸಚಿವ(ಆರ್ಥಿಕ ಮತ್ತು ಅಭಿವೃದ್ಧಿ) ಹೊಕುಗೋ ಕ್ಯೋಕು ಹಾಗೂ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್‌ ಸೇಠ್‌ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ₹ 4336 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಗೆ ಜಪಾನ್‌ ಸಂಸ್ಥೆ ಜೈಕಾದಿಂದ ಸಾಲ ಸೌಲಭ್ಯ ಪಡೆದುಕೊಳ್ಳಲಾಗಿದೆ. ಈ ಯೋಜನೆಯಿಂದ ನಾಲ್ಕು ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶವಿದೆ. ಈ ಯೋಜನೆಯಿಂದ ನಗರಕ್ಕೆ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ಪೂರೈಕೆಯಾಗಲಿದೆ. ಎಲ್ಲೆಲ್ಲಿಗೆ ನೀರು ? ಯಶವಂತಪುರ ವಿಧಾನಸಭಾ ಕ್ಷೇತ್ರದ 13 ಹಳ್ಳಿಗಳಲ್ಲಿ 48000 ಸಂಪರ್ಕ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ 6 ಹಳ್ಳಿಗಳಲ್ಲಿ 37500 ಸಂಪರ್ಕ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ 26 ಹಳ್ಳಿಗಳಲ್ಲಿ 73500 ಸಂಪರ್ಕ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ 32 ಹಳ್ಳಿಗಳಲ್ಲಿ 96750 ಸಂಪರ್ಕ ಮಹದೇವಪುರ ಕ್ಷೇತ್ರದ 33 ಹಳ್ಳಿಗಳಲ್ಲಿ 93100 ನೀರಿನ ಸಂಪರ್ಕ ರಾಜರಾಜೇಶ್ವರಿ ನಗರ ಬೊಮ್ಮನಹಳ್ಳಿ ಹಾಗೂ ಕೆ.ಆರ್.‌ಪುರ ವಿಧಾನ ಸಭಾ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ನೀರಿನ ಸಂಪರ್ಕ ಸಿಗಲಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಳ್ಳಲು ಯೋಜನೆ ಸಿದ್ಧವಾಗಿದೆ. ಎತ್ತಿನಹೊಳೆ ಯೋಜನೆಯಿಂದ ಅಲ್ಲಿಗೆ 2.5 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳುವ ಯೋಜನೆ ತಯಾರಾಗುತ್ತಿದೆ
ಡಿ.ಕೆ.ಶಿವಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ, ಉಪಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.