ಕೆಂಗೇರಿ: ‘ಭೂಕಂಪದಂತಹ ಪ್ರಾಕೃತಿಕ ವಿಕೋಪಗಳ ಬಗ್ಗೆ ನಿಖರ ಮಾಹಿತಿ ನೀಡುವ ಸೂಪರ್ ಕಂಪ್ಯೂಟರ್‌ಗಳು ದೇಶದ ಅರ್ಥ ವ್ಯವಸ್ಥೆಯಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತಿವೆ’ ಎಂದು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಸಂಸ್ಥೆ ಕಾರ್ಯ ನಿರ್ವಾಹಕ ಎಸ್.ಡಿ.ಸುದರ್ಶನ್ ಹೇಳಿದರು.
ಮಲ್ಲತ್ತಹಳ್ಳಿ ಬಳಿಯ ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಹಾಗೂ 8ನೇ ರಾಷ್ಟ್ರೀಯ ತಾಂತ್ರಿಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಕಂಪ್ಯೂಟರ್ ಕ್ಷೇತ್ರ ಗಣನೀಯ ಕೊಡುಗೆ ನೀಡಿದೆ. ತಂತ್ರಜ್ಞಾನವು ಎಂದಿಗೂ ಮಾನವ ಜನಾಂಗದ ಏಳ್ಗೆಗೆ ಹಾಗೂ ಪ್ರಕೃತಿಗೆ ಪೂರಕವಾಗಿರಬೇಕು ಎಂದರು.
ಭಾರತೀಯ ಸಮಾಜವು ಇಂದಿಗೂ ಅನೇಕ ಕ್ರೂರ ಆಚರಣೆಗಳಿಗೆ ಸಾಕ್ಷಿಯಾಗಿದೆ. ಜಾತೀವಾದ ಇಂದಿಗೂ ಬಲವಾಗಿ ಬೇರೂರಿದೆ ಎಂದು ಪಿವಿಪಿ ಟ್ರಸ್ಟ್ ಖಜಾಂಚಿ ಎಂ.ಮಹಾದೇವ್ ಬೇಸರ ವ್ಯಕ್ತಪಡಿಸಿದರು.
ಭಾರತೀಯ ಸಮಾಜವನ್ನು ಅಂಬೇಡ್ಕರ್ ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದರು. ಹಾಗಾಗಿ, ಸರ್ವರಿಗೂ ಸಲ್ಲುವ, ಸರ್ವರನ್ನೂ ಒಳಗೊಳ್ಳುವ ಸಂವಿಧಾನ ರೂಪಿಸಲು ಸಾಧ್ಯವಾಯಿತು. ಸಂವಿಧಾನದ ಪೀಠಿಕೆ ಸಂವಿಧಾನದ ಸಾರವನ್ನು ಪ್ರತಿಬಿಂಬಿಸುವಂತಿದೆ. ಪ್ರತಿಯೊಬ್ಬರೂ ಈ ಪೀಠಿಕೆಯ ಧ್ಯೇಯೋದ್ದೇಶ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಅಮೋಘ ಸಂಶೋಧನೆಯಾಗಿದೆ. ಸ್ವಯಂ ನಿರ್ಧಾರ ಸಾಮರ್ಥ್ಯ ಹೊಂದಿರುವ ಎಐ ತಂತ್ರಜ್ಞಾನಾಧಾರಿತ ರೋಬೋಗಳು ವೈದ್ಯಕೀಯ ಕ್ಷೇತ್ರದಲ್ಲಿ ಸಹಾಯಕಾರಿಯಾಗಿವೆ. ದುರ್ಬಳಕೆಯಾದರೆ ಮಾನವ ಜನಾಂಗಕ್ಕೆ ಅತ್ಯಂತ ಮಾರಕವಾಗುವ ಸಾಧ್ಯತೆಯೂ ನಿಚ್ಚಳವಾಗಿದೆ’ ಎಂದು ಪಿವಿಪಿ ಟ್ರಸ್ಟಿನ ಕಾರ್ಯದರ್ಶಿ ಶಿವಮಲ್ಲು ಆತಂಕ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.