ADVERTISEMENT

ಪೌರಕಾರ್ಮಿಕರ ಕರಡು ಆಯ್ಕೆ ಪಟ್ಟಿ ಇಂದು ಪ್ರಕಟ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 1:22 IST
Last Updated 9 ಅಕ್ಟೋಬರ್ 2024, 1:22 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪೌರಕಾರ್ಮಿಕ ಹುದ್ದೆಗಳಿಗೆ ಆಯ್ಕೆಯಾಗಿರುವ 12,692 ಅಭ್ಯರ್ಥಿಗಳ ಕರಡು ಪಟ್ಟಿಯನ್ನು ಅಕ್ಟೋಬರ್ 9ರಂದು ಪಾಲಿಕೆ ಪ್ರಕಟಿಸಲಿದೆ.

‘ಪಾಲಿಕೆ ವ್ಯಾಪ್ತಿಯಲ್ಲಿ ನೇರ ಪಾವತಿಯಡಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ‘ಡಿ’ ವೃಂದದ ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 3,673 ಹಾಗೂ ಎರಡನೇ ಹಂತದಲ್ಲಿ 11,307 ಹುದ್ದೆಗಳು ಸೇರಿದಂತೆ ಒಟ್ಟು 14,980 ಪೌರಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕಾಗಿದೆ. ಇದರಲ್ಲಿ ನಿಯಮಾನುಸಾರ 12,692 ಅರ್ಹ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ’ ಎಂದು ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣೆ ಹಾಗೂ ವಿವಿಧ ಸ್ವಚ್ಛತಾ ಕಾರ್ಯಗಳ ನಿರ್ವಹಣೆಗಾಗಿ ಘನತ್ಯಾಜ್ಯ ವಿಭಾಗದಲ್ಲಿ ನೇರ ಪಾವತಿಯಡಿ(ಡಿಪಿಎಸ್) ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಂದ 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ದೀರ್ಘಾವಧಿ ಸೇವೆ, ರೋಸ್ಟರ್ ಪದ್ದತಿ ಹಾಗೂ ವಿವಿಧ ಮಾನದಂಡಗಳ ಆಧಾರದ ಮೇಲೆ ಎರಡು ಹಂತಗಳಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದವರ ಪೈಕಿ 12,692 ಪೌರಕಾರ್ಮಿಕರನ್ನು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

ADVERTISEMENT

ಕರಡು ಆಯ್ಕೆ ಪಟ್ಟಿಯನ್ನು ಪಾಲಿಕೆ ವೆಬ್‌ಸೈಟ್ https://bbmp.gov.in/home ನಲ್ಲಿ ಪ್ರಕಟಿಸಲಾಗುತ್ತಿದೆ. ಅಲ್ಲದೆ, ಆಯಾ ವಲಯದ ಜಂಟಿ ಆಯುಕ್ತರ ಕಚೇರಿ ಹಾಗೂ ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಯಲ್ಲೂ ಪಟ್ಟಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳಿದ್ದರೆ ಅ.21ರೊಳಗೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

‘ಪೌರಕಾರ್ಮಿಕರ ಹುದ್ದೆಗೆ ಆಯ್ಕೆಯಾಗಿರುವವರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗಬಾರದು. ಮಧ್ಯವರ್ತಿಗಳ ಮಾತುಗಳನ್ನು ಕೇಳಿ ವಂಚನೆಗೆ ಒಳಗಾಗಬಾರದು. ಪಟ್ಟಿಯ ಬಗ್ಗೆ ಮಾಹಿತಿ ಅಥವಾ ವಿವರಣೆ ಬೇಕಿದ್ದರೆ ಬಿಬಿಎಂಪಿ ಕಚೇರಿಗೆ ಭೇಟಿ ನೀಡಬೇಕು’ ಎಂದು ಅವಿನಾಶ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.