ಯಲಹಂಕ: ಇಲ್ಲಿನ ಜಿಕೆವಿಕೆ ಬಡಾವಣೆಯ ರೈಲ್ವೆ ಸಮಾನಾಂತರ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
ಜಕ್ಕೂರಿನಿಂದ ಜಿಕೆವಿಕೆ ಬಡಾವಣೆಯ ಮೂಲಕ ಯಲಹಂಕ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸುತ್ತಮುತ್ತಲ ಬಡಾವಣೆಗಳ ನೂರಾರು ಜನ ವಾಯುವಿಹಾರಕ್ಕಾಗಿ ಬರುತ್ತಾರೆ. ಆದರೆ ಸುತ್ತಮುತ್ತಲ ಅಪಾರ್ಟ್‌ಮೆಂಟ್ ಸಮುಚ್ಚಯಗಳಿಂದ ಹರಿದು ಬರುತ್ತಿರುವ ಮಲಿನ ನೀರು, ರಸ್ತೆಯ ಪಕ್ಕದ ಗುಂಡಿಗಳಲ್ಲಿ ಸಂಗ್ರಹವಾಗಿ ಚಿಕ್ಕ ಕೆರೆಯಂತಾಗಿದೆ. ಇದರಿಂದ ಈ ಪ್ರದೇಶದಲ್ಲಿ ದುರ್ವಾಸನೆ ಹರಡಿದೆ ಎಂದು ಸಾರ್ವಜನಿಕರು ದೂರುತ್ತಾರೆ.
‘ಹಲವು ತಿಂಗಳುಗಳಿಂದ ಸಮಸ್ಯೆ ಹೀಗೆಯೇ ಇದೆ. ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಬಿಗಡಾಯಿಸಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿರುವುದರಿಂದ ಸ್ಥಳೀಯ ನಿವಾಸಿಗಳು ಸೇರಿದಂತೆ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸಬೇಕಾಗಿದೆ’ ಎಂದು ಜಿಕೆವಿಕೆ ಬಡಾವಣೆ ನಿವಾಸಿ ನಾಗರಾಜಪ್ಪ ದೂರಿದರು.
‘ಸಂಸ್ಕರಣೆ ಸಂಸ್ಕರಣೆ ಕೊಳಚೆ ನೀರನ್ನು ಅಪಾರ್ಟ್‌ಮೆಂಟ್‌ಗಳವರು ರಸ್ತೆಗೆ ಬಿಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದಾಗ ಜಲಮಂಡಳಿ ಅಧಿಕಾರಿಗಳು ಒಮ್ಮೆ ಬಂದು ಪರಿಶೀಲಿಸಿ ಹೋದರು. ಆದರೆ ಈವರೆಗೆ ಸಮಸ್ಯೆ ಬಗೆಹರಿದಿಲ್ಲ’ ಎಂದು ಜಿಕೆವಿಕೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಬಿ.ಸಿ.ಶಂಕರಲಿಂಗಪ್ಪ ತಿಳಿಸಿದರು.
‘ರಸ್ತೆಯ ಇಕ್ಕೆಲಗಳಲ್ಲಿ ಬೆಳೆದುಕೊಂಡಿರುವ ಪೊದೆಗಳು, ಅರ್ಧದಷ್ಟು ರಸ್ತೆಯನ್ನು ಆಕ್ರಮಿಸಿಕೊಂಡಿವೆ. ಸಂಚಾರಕ್ಕೂ ತೊಂದರೆಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ಅಪರಿಚಿತರು ತ್ಯಾಜ್ಯವನ್ನು ತಂದು ಇಲ್ಲಿಯೇ ಎಸೆದು ಹೋಗುತ್ತಾರೆ. ವಿದ್ಯುತ್ ದೀಪಗಳು ಇಲ್ಲದಿರುವುದರಿಂದ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಜನರು ಭಯದಿಂದ ಸಂಚರಿಸಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ, ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ಈ ಕುರಿತು ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಕೊಳಚೆ ನೀರು ಹರಿದು ಬರುತ್ತಿರುವ ಸ್ಥಳವನ್ನು ಗುರುತಿಸಿ, ಅದನ್ನು ತಡೆಗಟ್ಟಲಾಗುವುದು. ಎಲ್ಲ ಸಮಸ್ಯೆ ಪರಿಹರಿಸಲಾಗುವುದು’ ಎಂದು ಜಲಮಂಡಳಿಯ ಸಹಕಾರ ನಗರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹನುಮಂತ ಗಂಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.