ಬೆಂಗಳೂರು: ‘ದೇಶದಲ್ಲಿ ಹಿಂದಿ ಮತ್ತು ಸಂಸ್ಕೃತ ಭಾಷೆಗೆ ನೀಡುವ ಪ್ರಾಮುಖ್ಯವನ್ನು ದ್ರಾವಿಡ ಭಾಷೆಗಳಿಗೆ ನೀಡುತ್ತಿಲ್ಲ’ ಎಂದು ಸಾಹಿತಿ ಹಂ.ಪ. ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು.
ದ್ರಾವಿಡ ಭಾಷಾ ಅನುವಾದಕರ ಸಂಘ (ಡಿ.ಬಿ.ಟಿ.ಎ) ನಗರದಲ್ಲಿ ಗುರುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಲೇಖಕಿ ಗೌರಿ ಕಿರುಬನಂದನ್ ಅವರಿಗೆ ‘ದ್ರಾವಿಡ ಭಾಷಾ ಅನುವಾದ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿಯು ₹11,111 ನಗದು ಒಳಗೊಂಡಿದೆ.
‘ದ್ರಾವಿಡ ಭಾಷೆಗಳಲ್ಲಿ ಪ್ರತಿಭಾನ್ವಿತ ಸಾಹಿತಿಗಳನ್ನು ಪ್ರಾದೇಶಿಕ ಭಾಷೆಗಳಿಗೆ ಸೀಮಿತಗೊಳಿಸಲಾಗಿದೆ. ದ್ರಾವಿಡ ಭಾಷೆ
ಗಳಲ್ಲಿ ತಮಿಳು ಭಾಷಾ ಸಾಹಿತ್ಯ ಮಾತ್ರ ಜಗತ್ತಿನ ವಿವಿಧ ಭಾಷೆಗಳಿಗೆ ಅನುವಾದಗೊಂಡಿದೆ. ಕನ್ನಡ, ತೆಲುಗು, ಮಲಯಾಳ ಭಾಷೆಯ ಸಾಹಿತ್ಯ ಅಷ್ಟಾಗಿ ಜಗತ್ತಿನ ಬೇರೆ ಭಾಷೆಗಳಿಗೆ ಅನುವಾದ
ಗೊಂಡಿಲ್ಲ’ ಎಂದು ನಾಗರಾಜಯ್ಯ ಹೇಳಿದರು.
‘ದ್ರಾವಿಡ ಭಾಷೆಯ ಸಾಹಿತ್ಯ ಜಗತ್ತಿನ ವಿವಿಧೆಡೆ ತಲುಪಬೇಕಾದರೆ ಇಲ್ಲಿನ ಸಾಹಿತ್ಯ ಕೃತಿಗಳು ಜಾಗತಿಕ ಭಾಷೆಗೆ ಹೆಚ್ಚು ಹೆಚ್ಚು ಅನುವಾದವಾಗಬೇಕು. ಇದರಿಂದ ನಮ್ಮ ಭಾಷೆಯೂ ಜಾಗತಿಕ ಮಟ್ಟಕ್ಕೆ ಹೋಗಲಿದೆ’ ಎಂದರು.
ಕಲಾವಿದೆ ಲಕ್ಷ್ಮೀ ಚಂದ್ರಶೇಖರ್, ‘ದ್ರಾವಿಡ ಭಾಷೆಗಳು ಸಮೃದ್ಧ ಸಾಹಿತ್ಯ ಹೊಂದಿವೆ. ಈ ಭಾಷೆಗಳ ನಡುವೆ ಕೊಡುಕೊಳ್ಳುವಿಕೆ ಹೆಚ್ಚಬೇಕು’ ಎಂದು ಹೇಳಿದರು.
ಪ್ರಶಸ್ತಿ ಪುರಸ್ಕೃತೆ ಗೌರಿ ಕಿರುಬನಂದನ್, ‘ಮೂಲ ಕೃತಿಗೆ ಧಕ್ಕೆ ಬಾರದಂತೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದ ಮಾಡುವುದು ಸುಲಭವಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.