ADVERTISEMENT

ಹೊಸ ಬೆಳಕು: ಕೇಕ್‌ ಕಪ್‌ಗಳ ‘ಬ್ರ್ಯಾಂಡ್‌‘ ಈ ಮೇಘನಾ ಜೈನ್‌!

ಸಚ್ಚಿದಾನಂದ ಕುರಗುಂದ
Published 26 ಜನವರಿ 2022, 19:31 IST
Last Updated 26 ಜನವರಿ 2022, 19:31 IST
ಮೇಘನಾ ಜೈನ್‌
ಮೇಘನಾ ಜೈನ್‌   

ಬೆಂಗಳೂರು: ಬೇಕರಿ ಕ್ಷೇತ್ರದ ಕುರಿತು ವಿದ್ಯಾರ್ಥಿದೆಸೆಯಲ್ಲಿಯೇ ಮೂಡಿದ ಒಲವುಈ ಯುವತಿಗೆ ನವೋದ್ಯಮ ಆರಂಭಿಸುವ ದಾರಿ ತೋರಿಸಿತು. ಆ ಮೂಲಕ, ಈ ಯುವತಿ ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿ ಕಾಣುತ್ತಾರೆ.

ಬೇಕರಿ ಕ್ಷೇತ್ರದಲ್ಲಿ ಹೊಸತನ ಮತ್ತು ವಿಭಿನ್ನ ರೀತಿಯ ಮಾದರಿಯ ಕೇಕ್‌ಗಳನ್ನು ಬಹುತೇಕ ಆನ್‌ಲೈನ್‌ ಮೂಲಕವೇ ವಹಿವಾಟು ನಡೆಸುತ್ತಿರುವ 26ರ ಹರೆಯದ ಮೇಘನಾ ಜೈನ್‌, ತಮ್ಮ ವ್ಯಾಪಾರ ವಹಿವಾಟಿನ ಜಾಲವನ್ನು ಈಗ ದೇಶದಾದ್ಯಂತ ವಿಸ್ತರಿಸಿಕೊಂಡಿದ್ದಾರೆ. ಅವರಲ್ಲಿರುವ ಉದ್ಯೋಗಿಗಳಲ್ಲಿ ಒಬ್ಬ ಡೆಲಿವರಿ ಬಾಯ್‌ ಮತ್ತು ಡೇಟಾ ಅನಾಲಿಟಿಕ್ಸ್‌ ಹೊರತುಪಡಿಸಿದರೆ ಉಳಿದ ಎಲ್ಲರೂ ಮಹಿಳೆಯರು!

ಕೋವಿಡ್‌ ಮತ್ತು ಉದ್ಯಮದ ಹತ್ತು ಹಲವು ಸವಾಲುಗಳ ನಡುವೆಯೂ ಕೇಕ್‌ ಕಪ್‌ಗಳ ಬ್ರ್ಯಾಂಡ್‌ಗೆ ಮೇಘನಾ ಜೈನ್‌ ಹೆಸರುವಾಸಿಯಾಗಿದ್ದಾರೆ. ಬಿ.ಕಾಂ. ಓದುವಾಗಲೇ ಕೇಕ್ ಕಪ್‌ಗಳನ್ನು ತಯಾರಿಸುವುದನ್ನು ಆರಂಭಿಸಿದ್ದರು. ಸಹಪಾಠಿಗಳಿಗೆ ಕೇಕ್‌ ಮಾರಾಟ ಮಾಡುತ್ತಿದ್ದರು. ನಂತರ, ಕಾಲೇಜಿನ ಕೆಫೆಟೆರಿಯಾದಲ್ಲಿ ಮಾರಾಟ ಮಾಡಿದರು.

ADVERTISEMENT
‘ಡ್ರೀಮ್‌ ಎ ಡಜನ್‌ ‘ ತಂಡ.

ಪದವಿ ಪಡೆದ ಬಳಿಕ ಮೂರು ತಿಂಗಳು ತರಬೇತಿ ಪಡೆದು, ಸ್ವಂತ ನವೋದ್ಯಮ ಆರಂಭಿಸಬೇಕು ಎನ್ನುವ ಯೋಚನೆ ಮೂಡಿದಾಗ ಹತ್ತಾರು ಪ್ರಶ್ನೆಗಳು, ಸವಾಲುಗಳು ಎದುರಾದವು. ಸಣ್ಣ ಉದ್ಯಮವನ್ನು ಮೊದಲು ಮನೆಯಿಂದಲೇ ಆರಂಭಿಸಿದರು. ನಂತರ ಜೆ.ಪಿ. ನಗರದಲ್ಲಿ ’ಡ್ರೀಮ್‌ ಎ ಡಜನ್‌’ ಹೆಸರಿನಲ್ಲಿ ಬೇಕರಿ ತೆರೆದರು.

‘ಆಹಾರ ಉದ್ಯಮದಲ್ಲಿ ಮಹಿಳೆಯರು ಕಡಿಮೆ. ಆದರೆ, ನಮ್ಮಲ್ಲಿ ಇಬ್ಬರನ್ನು ಹೊರತುಪಡಿಸಿದರೆ ಎಲ್ಲರೂ ಮಹಿಳೆಯರೇ. 15 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಉದ್ಯಮ ಯಾರೇ ಆರಂಭಿಸಿದರೂ ಸವಾಲು ಇದ್ದೇ ಇರುತ್ತದೆ. ಆದರೆ, ಮಹಿಳೆಗೆ ಹೆಚ್ಚು ಸವಾಲುಗಳು. ಆರಂಭದಲ್ಲಿ ಕಟ್ಟಡ ಬಾಡಿಗೆ ಪಡೆಯಲು ಹೋದಾಗ ತಂದೆಯನ್ನು ಕರೆದುಕೊಂಡು ಬರಲು ಮಾಲೀಕರು ಸೂಚಿಸಿದರು. ಅಂದರೆ, ಮಹಿಳೆಯರ ಮೇಲೆ ವಿಶ್ವಾಸ ಇರಿಸುವುದು ಕಷ್ಟ. ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇವರಿಂದ ಸಾಧ್ಯವಾಗುವುದಿಲ್ಲ ಎನ್ನುವ ಅನುಮಾನದಿಂದಲೇ ನೋಡುತ್ತಾರೆ‘ ಎಂದು ಮೇಘನಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.

‘ಈಗಲೂ ನಮ್ಮಲ್ಲಿ ಬರುವವರು ಮಾಲೀಕರು ಯಾರು ಎನ್ನುವ ಪ್ರಶ್ನೆಯನ್ನು ನನ್ನನ್ನೇ ಕೇಳುತ್ತಾರೆ. ಚಿಕ್ಕವಯಸ್ಸಿನಲ್ಲಿ ಒಬ್ಬ ಯುವತಿ ದೊಡ್ಡ ಜವಾಬ್ದಾರಿ ವಹಿಸಿಕೊಂಡಿದ್ದಾಳೆ ಎನ್ನುವುದನ್ನು ಅವರು ನಂಬುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಒಬ್ಬ ಮಹಿಳೆ ಏಕೆ ಮಾಲೀಕರಾಗುತ್ತಾರೆ ಎನ್ನುವ ಮನಸ್ಥಿತಿಯೂ ಇದಕ್ಕೆ ಕಾರಣ ಇರಬಹುದು‘ ಎಂದು ಹೇಳುತ್ತಾರೆ.

‘ನನ್ನ ಅಜ್ಜಿಯೇ ನನಗೆ ಸ್ಫೂರ್ತಿ. ಸುಮಾರು 40 ವರ್ಷಗಳ ಕಾಲ ಅವರು ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ, ನನಗೆ ಸ್ವಂತ ಉದ್ಯಮದ ಬಗ್ಗೆ ಆಸಕ್ತಿ ಮೂಡಿತು. ಕಪ್‌ ಕೇಪ್‌ಗಳನ್ನು ಮಾಡುವುದರಲ್ಲಿ ನಾವು ಪರಿಣತಿ ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ಕೇಕ್‌ ತಯಾರಿಸುವುದನ್ನು ವಿಸ್ತರಿಸಲು ಮತ್ತಷ್ಟು ಕಿಚನ್‌ಗಳನ್ನು ಆರಂಭಿಸುವ ಉದ್ದೇಶವಿದೆ. ವಿಶ್ವದಾದ್ಯಂತ ಈ ವಹಿವಾಟು ವಿಸ್ತರಿಸುವ ಗುರಿ ನನ್ನದು‘ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.