ADVERTISEMENT

ಡ್ರೋಣ್‌ ಮೂಲಕ ಆಸ್ತಿಯ ಭೌತಿಕ ಮಾಪನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 19:05 IST
Last Updated 11 ಜುಲೈ 2018, 19:05 IST

ಬೆಂಗಳೂರು: ಡ್ರೋಣ್ ಮೂಲಕ ಆಸ್ತಿಯ ಭೌತಿಕ ಮಾಪನ ಮಾಡುವ ಪ್ರಾಯೋಗಿಕ ಪ್ರಕ್ರಿಯೆಗೆ ನಗರದಲ್ಲಿ ಬುಧವಾರ ಚಾಲನೆ ನೀಡಲಾಯಿತು.

ಭೂಮಾಪನ ಹಾಗೂ ಸರ್ವೆ ಇಲಾಖೆಯ ಆಯುಕ್ತ ಮುನಿಶ್‌ ಮೌದ್ಗಿಲ್‌ ನೇತೃತ್ವದಲ್ಲಿ ಡ್ರೋಣ್‌ ಬಳಸಿ ಜಯನಗರದ 4ನೇ ಬ್ಲಾಕ್‌ನ ಆಸ್ತಿಗಳ ಸಮೀಕ್ಷೆ ಮಾಡಲಾಯಿತು.

ಸರದಿ ಪ್ರಕಾರ ಜಯನಗರದ ಮನೆಗಳಿಗೆ ಹೋದ ಭೂಮಾಪನ ಹಾಗೂ ಸರ್ವೆ ಇಲಾಖೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ,ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕಾರ, ನಿವಾಸಿಗಳ ಬಳಿಯಿದ್ದ ದಾಖಲೆಗಳನ್ನು ಪರಿಶೀಲಿಸಿದರು. ನಂತರವೇ ಸಮೀಕ್ಷೆ ಪ್ರಕ್ರಿಯೆ ಆರಂಭಿಸಿದರು.

ADVERTISEMENT

ಆಯಾ ಕಟ್ಟಡದ ಕಾರ್ಪೆಟ್ ಏರಿಯಾ, ಫ್ಲೋರ್‌ ಏರಿಯಾ, ಮಹಡಿಗಳು ಮತ್ತಿತರ ವಿವರಗಳನ್ನು ಸಮೀಕ್ಷೆಯಲ್ಲಿ ನಮೂದಿಸಿಕೊಂಡರು. ಆಸ್ತಿ ವಿವರ ದಾಖಲೆಗಳನ್ನು ಒದಗಿಸದ ಮಾಲೀಕರಿಗೆ, ಅವುಗಳನ್ನು ಒದಗಿಸಲು ಕಾಲಾವಕಾಶ ನೀಡಿದರು.

‘ಇಲಾಖೆಯ ದಾಖಲೆಗಳ ಪ್ರಕಾರ, ಜಯನಗರದ ಪ್ರತಿ ವಾರ್ಡ್‌ನಲ್ಲಿ ಸುಮಾರು 6 ಸಾವಿರ ಆಸ್ತಿಗಳಿವೆ. ಇಡೀ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳಿವೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಇದೇ ಮೊದಲ ಬಾರಿಗೆ ಡ್ರೋಣ್ ಬಳಸಿ ಸಮೀಕ್ಷೆ ಆರಂಭಿಸಿದ್ದೇವೆ. ಸ್ಯಾಟಲೈಟ್‌ ಚಿತ್ರಗಳನ್ನು ಸಮೀಕ್ಷೆಗಾಗಿ ಬಳಸಿಕೊಳ್ಳುತ್ತಿದ್ದೇವೆ. ಇದು ಪ್ರಾಯೋಗಿಕ ಪ್ರಕ್ರಿಯೆ, ಯಶಸ್ವಿಯಾದರೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.