ಬೆಂಗಳೂರು: ಮೇಳದಲ್ಲಿ ‘ಡ್ರೋನ್’ ಎನ್ನುವ ಈ ಗುಂಗೀ ಹುಳದ್ದೇ ಸದ್ದು. ಮೇಲಕ್ಕೆ ನೆಗೆದು ಹಾರಾಟ ಆರಂಭಿಸಿದರೆ ಮೊಬೈಲ್‌ಗಳಲ್ಲಿ ವಿಡಿಯೊ ಚಿತ್ರೀಕರಣ ಮಾಡುವ, ಫೋಟೊ ಕ್ಲಿಕ್ಕಿಸುವ ಧಾವಂತ. ನೋಡುಗರದ್ದು ಓಹೋ ಎನ್ನುವ ಉದ್ಗಾರ. ಎಬಿಸಿ4ಡಿ ಕಂಪನಿ ಈ ಡ್ರೋನ್‌ಗಳನ್ನು ಪ್ರದರ್ಶನಕ್ಕಿಟ್ಟಿದೆ. ಹುಳುವಿನಂತೆ ಸದ್ದು ಮಾಡುತ್ತಾ ಹಾರಾಟಕ್ಕೆ ಸಜ್ಜಾಗಿ ನಿಂತ ಡ್ರೋನ್‌ಗಳತ್ತ ರೈತರು ಕುತೂಹಲದ ದೃಷ್ಟಿ ಹಾಯಿಸಿದರು.
ಕೃಷಿ ಭೂಮಿಗೆ ಕ್ರಿಮಿನಾಶಕ ಸಿಂಪಡಿಸಲು ಈಗ ಡ್ರೋನ್ ಬಳಕೆಗೆ ಬಂದಿದೆ. 5, 10, 20 ಲೀಟರ್ ಸಾಮರ್ಥ್ಯದ ಡ್ರೋನ್‌ಗಳಿವೆ. 1ಗಂಟೆ ಅವಧಿಯಲ್ಲಿ 10 ಎಕರೆ ಪ್ರದೇಶಕ್ಕೆ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸಬಹುದಾಗಿದೆ. ಭತ್ತ, ರಾಗಿ, ಜೋಳ, ಅವರೆ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳಿಗೆ ಅತ್ಯಂತ ಸುಲಭದಲ್ಲಿ ಕ್ರಿಮಿನಾಶಕ ಸಿಂಪಡಿಸಬಹುದು. ಆದರೆ, ತೆಂಗು, ಅಡಕೆ ಮೊದಲಾದ ಬೆಳೆಗಳಿಗೆ ಇದರ ಬಳಕೆ ಕಷ್ಟ.
ಜಿಪಿಎಸ್ ತಂತ್ರಜ್ಞಾನ ಬಳಸಿ 1ಸಾವಿರ ಮೀಟರ್‌ವರೆಗೂ ಡ್ರೋನ್ ನಿಯಂತ್ರಿಸಬಹುದಾಗಿದೆ. ಬೆಳೆಗಳ ಗುಣಲಕ್ಷಣಕ್ಕೆ ಅನುಗುಣವಾಗಿ ಎಷ್ಟು ಎತ್ತರಕ್ಕೆ ಹಾರಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕಾಗುತ್ತದೆ. ಕ್ರಿಮಿನಾಶಕ ಖಾಲಿಯಾದ ಕೂಡಲೇ ಸ್ವಸ್ಥಾನಕ್ಕೆ ಹಿಂತಿರುಗುವ ಸೆನ್ಸಾರ್ ತಂತ್ರಜ್ಞಾನ ಸಾಮರ್ಥ್ಯವನ್ನು ಈ ಪುಟ್ಟ ಯಂತ್ರ ಹೊಂದಿದೆ. ಆದರೆ, ಮಳೆ – ವಿಪರೀತ ಗಾಳಿ ಸಮಯದಲ್ಲಿ ಕಾರ್ಯ ನಿರ್ವಹಿಸಲಾರದು ಎಂದು ಕಂಪನಿಯ ಮಾರಾಟ ಪ್ರತಿನಿಧಿಗಳು ತಿಳಿಸಿದರು.
‘ಬಳ್ಳಾರಿಯಲ್ಲಿ ಕೃಷಿ ಬಳಕೆಯ ಡ್ರೋನ್ ಉತ್ಪಾದನಾ ಘಟಕವಿದ್ದು, ಎರಡು ವರ್ಷದಿಂದೀಚೆಗೆ ಈ ಆಧುನಿಕ ಕೃಷಿ ಉಪಕರಣವನ್ನು ಬಳಸಲಾಗುತ್ತಿದೆ. ಬೆಳೆಗಳಿಗೆ ಕೀಟನಾಶಕ ಸಿಂಪಡಣೆ ಮಾಡಲು ಡ್ರೋನ್‌ಗಳು ಬಲು ಪ್ರಯೋಜನಕಾರಿ. ಕೂಲಿಯಾಳುಗಳ ಕೊರತೆ ನೀಗಿಸಿಕೊಳ್ಳಬಹುದು. ಮಾನವ ಶ್ರಮ ಉಳಿಸುವುದರ ಜೊತೆಗೆ ಕೀಟನಾಶಕ ಪರಿಣಾಮಕಾರಿ ಸಿಂಪಡಣೆಯೂ ಸುಲಭವಾಗಲಿದೆ. ಸಮಯಕ್ಕೆ ಸರಿಯಾಗಿ ಬೇಸಾಯ ಕೈಗೊಂಡು ಹೆಚ್ಚು ಉತ್ಪಾದನೆ ಪಡೆಯಬಹುದು ಎಂದು ಕಂಪನಿಯ ಎಂಜಿನಿಯರ್ ಸಂತೋಷ್ ಕುಮಾರ್ ವಿವರಿಸಿದರು.
ಕೇಂದ್ರದ ಅನುಮತಿಯೊಂದಿಗೆ ರಾಜ್ಯದ ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಯಾದಗಿರಿ, ಧಾರವಾಡ, ಗದಗ, ರಾಯಚೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪ್ತಿಯ 66 ಕೇಂದ್ರಗಳಲ್ಲಿ ಫ್ರಾಂಚೈಸಿಗಳಿದ್ದು ಡ್ರೋನ್ ಖರೀದಿ ಮಾಡಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಔಷಧ ಹಾಗೂ ನೀರು ನೀಡಿದರೆ ಒಂದು ಎಕರೆಗೆ ಸಿಂಪಡಣೆ ಮಾಡಲು ₹500 ಬಾಡಿಗೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
******
ಮೂರು ವಿಧಗಳ ಡ್ರೋನ್‌ಗಳು ನಮ್ಮಲ್ಲಿ ಲಭ್ಯ. ಇವುಗಳಿಗೆ ಕ್ರಮವಾಗಿ ₹ 5ಲಕ್ಷ, ₹ 6ಲಕ್ಷ ಹಾಗೂ ₹8 ಲಕ್ಷ ಬೆಲೆ ಇದೆ.
- ಮಹೇಶ್, ಕಂಪನಿ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.