ADVERTISEMENT

ಬೆಂಗಳೂರು | ಡ್ರಗ್ಸ್‌ ದಂಧೆ: ತಾಯಿ, ಪುತ್ರಿ ವಿರುದ್ಧ ಎಫ್‌ಐಆರ್‌

ವಿದೇಶದಿಂದ ಮಧ್ಯವರ್ತಿಗಳ ಮೂಲಕ ನಗರಕ್ಕೆ ಮಾದಕ ವಸ್ತುಗಳ ಪೂರೈಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:08 IST
Last Updated 6 ಜುಲೈ 2024, 16:08 IST
   

ಬೆಂಗಳೂರು: ವಿದೇಶದಲ್ಲಿ ಕುಳಿತು ನಗರದಲ್ಲಿ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ತಾಯಿ ಹಾಗೂ ಪುತ್ರಿ ಸೇರಿ ಮೂವರ ವಿರುದ್ಧ ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

‘ದುಬೈನಲ್ಲಿ ನೆಲೆಸಿರುವ ಲೀನಾ, ಅವರ ಪುತ್ರಿ ನತಾಲಿಯಾ ಹಾಗೂ ಬೆಂಗಳೂರಿನ ರಂಜನ್ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

‘23 ವರ್ಷದ ಪುತ್ರನಿಗೆ ಡ್ರಗ್ಸ್ ಪೂರೈಸಿದ್ದ ಆರೋಪಿಗಳ ವಿರುದ್ಧ ಕ್ರಮ ಕೋರಿ ಉದ್ಯಮಿಯೊಬ್ಬರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

‘ತಾಯಿ ಹಾಗೂ ಪುತ್ರಿ ವಿದೇಶದಲ್ಲಿದ್ದುಕೊಂಡೇ ನಗರದ ರಂಜನ್‌ ಎಂಬುವವರಿಗೆ ಹೈಡ್ರೊ ಗಾಂಜಾ, ಎಂಡಿಎಂಎ ಕ್ರಿಸ್ಟಲ್‌ ಪೂರೈಸುತ್ತಿದ್ದರು. ಆರೋಪಿ ನತಾಲಿಯಾ ಆಗಾಗ್ಗೆ ಬೆಂಗಳೂರಿಗೆ ಬರುತ್ತಿದ್ದರು. ಕೆಲ ದಿನಗಳು ನೆಲಸಿ ಗ್ರಾಹಕರನ್ನು ಸೆಳೆಯುತ್ತಿದ್ದರು. ಗ್ರಾಹಕರಿಂದ ಹಣ ಪಡೆಯಲು ಆರೋಪಿಗಳು ಬ್ಯಾಂಕ್‌ನಲ್ಲಿ ಪ್ರತ್ಯೇಕ ಖಾತೆಯನ್ನು ತೆರೆದಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಡ್ರಗ್ಸ್‌ ಪೂರೈಕೆಯಲ್ಲಿ ಇನ್ನು ಹಲವರು ಭಾಗಿಯಾಗಿರುವ ಮಾಹಿತಿಯಿದೆ. ಎಫ್‌ಐಆರ್‌ ದಾಖಲಾಗಿರುವ ಮೂವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.