ADVERTISEMENT

ಡ್ರಗ್ಸ್ ಜಾಲ: ಸಹಪಾಠಿ ರಕ್ಷಣೆಗೆ ‘ವಿದ್ಯಾರ್ಥಿ ಮಾರ್ಷಲ್’

* ಬೆಂಗಳೂರಿನ 24 ಕಾಲೇಜುಗಳಲ್ಲಿ ತಂಡಗಳ ರಚನೆ * ಮಾಹಿತಿ, ಜಾಗೃತಿ, ವಿಶೇಷ ಕಾರ್ಯಾಚರಣೆ ಗುರಿ

ಸಂತೋಷ ಜಿಗಳಿಕೊಪ್ಪ
Published 11 ಮಾರ್ಚ್ 2024, 0:04 IST
Last Updated 11 ಮಾರ್ಚ್ 2024, 0:04 IST
ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಅಭಿಯಾನದಲ್ಲಿ ಡ್ರಗ್ಸ್ ಹಾಗೂ ಸೈಬರ್ ಅಪರಾಧ ಜಾಗೃತಿ ಫಲಕಗಳನ್ನು ‘ವಿದ್ಯಾರ್ಥಿ ಪೊಲೀಸ್ ಮಾರ್ಷಲ್‌’ಗಳು ಪ್ರದರ್ಶಿಸಿದರು
ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಅಭಿಯಾನದಲ್ಲಿ ಡ್ರಗ್ಸ್ ಹಾಗೂ ಸೈಬರ್ ಅಪರಾಧ ಜಾಗೃತಿ ಫಲಕಗಳನ್ನು ‘ವಿದ್ಯಾರ್ಥಿ ಪೊಲೀಸ್ ಮಾರ್ಷಲ್‌’ಗಳು ಪ್ರದರ್ಶಿಸಿದರು   

ಬೆಂಗಳೂರು: ನಗರದಲ್ಲಿ ಮಾದಕ ವಸ್ತು (ಡ್ರಗ್ಸ್‌) ಸಾಗಣೆ ಹಾಗೂ ಮಾರಾಟ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲ ಶಾಲಾ– ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಜಾಲಕ್ಕೆ ಸಿಲುಕಿ ವ್ಯಸನಿಗಳಾಗುತ್ತಿದ್ದಾರೆ. ಇಂಥ ವಿದ್ಯಾರ್ಥಿಗಳನ್ನು ರಕ್ಷಿಸಲು ಹಾಗೂ ಡ್ರಗ್ಸ್ ಜಾಲವನ್ನು ಬುಡಸಮೇತ ಮಟ್ಟಹಾಕಲು ಪ್ರಮುಖ ಕಾಲೇಜುಗಳಲ್ಲಿ ‘ವಿದ್ಯಾರ್ಥಿ ಮಾರ್ಷಲ್‌’ಗಳ ತಂಡಗಳನ್ನು ರಚಿಸಲಾಗಿದೆ.

ಪೊಲೀಸರು ಮೇಲಿಂದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದರೂ ಡ್ರಗ್ಸ್ ಜಾಲದ ಕೃತ್ಯಕ್ಕೆ ಸಂಪೂರ್ಣ ಲಗಾಮು ಬೀಳುತ್ತಿಲ್ಲ. ಶಾಲೆ– ಕಾಲೇಜುಗಳ ಅಕ್ಕ–ಪಕ್ಕದಲ್ಲಿ ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಗರದ ಪೊಲೀಸರು, ಸಾರ್ವಜನಿಕ ಸಹಭಾಗಿತ್ವದ ‘ವಿದ್ಯಾರ್ಥಿ ಮಾರ್ಷಲ್‌’ ಪರಿಕಲ್ಪನೆಯ ಮೊರೆ ಹೋಗಿದ್ದಾರೆ.

‘ಇಂದಿನ ಯುವ ಸಮೂಹ, ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನಗಳ ವ್ಯಸನಿಗಳಾಗಿ ದಾರಿ ತಪ್ಪುತ್ತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡ ಪೋಷಕರು ಕಣ್ಣೀರಿಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯುವಜನತೆಯನ್ನು ರಕ್ಷಿಸುವ ಕರ್ತವ್ಯ ನಮ್ಮದು. ಇದೇ ಕಾರಣಕ್ಕೆ, ಶಾಲೆ–ಕಾಲೇಜು ಹಂತದಲ್ಲಿ ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ತಡೆಯಲು ವಿದ್ಯಾರ್ಥಿಗಳ ಮೂಲಕವೇ ಕಾರ್ಯತಂತ್ರ ರೂಪಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

50 ವಿದ್ಯಾರ್ಥಿಗೊಬ್ಬ ಪೊಲೀಸ್ ಮಾರ್ಷಲ್: ‘ಆರೋಹಣ ಫೌಂಡೇಷನ್‌ ಸಹಾಯದಿಂದ ಕಾಲೇಜುಗಳನ್ನು ಗುರುತಿಸಲಾಗಿದೆ. 50 ವಿದ್ಯಾರ್ಥಿಗಳಿಗೆ ಒಬ್ಬರನ್ನು ‘ಮಾರ್ಷಲ್’  ಮಾಡಲಾಗುತ್ತಿದೆ. ಸಹಪಾಠಿಗಳು ಅನುಭವಿಸುತ್ತಿರುವ ತೊಂದರೆ, ಅವರಿಗೆ ಬೇಕಾದ ನೆರವು ಬಗ್ಗೆ ಮಾರ್ಷಲ್‌ಗಳಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸಹಪಾಠಿಗಳ ರಕ್ಷಣೆಗಾಗಿ ಕೆಲಸ ಮಾಡುವಂತೆಯೂ ಅವರನ್ನು ಹುರಿದುಂಬಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳ ಒಡನಾಟ, ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನ ಸೇವನೆ, ಅಪರಾಧಗಳು ಸೇರಿದಂತೆ ಎಲ್ಲ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾರ್ಷಲ್‌ಗಳು ನಿಗಾ ವಹಿಸಲಿದ್ದಾರೆ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ ಆಯಾ ಠಾಣೆ ಇನ್‌ಸ್ಪೆಕ್ಟರ್‌ಗಳಿಗೆ ಮಾಹಿತಿ ನೀಡಲಿದ್ದಾರೆ. ಅದೇ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ’ ಎಂದು ಹೇಳಿದರು.

‘ಸಹಪಾಠಿಗಳ ಪ್ರತಿಯೊಂದು ಚಟುವಟಿಕೆಯೂ ವಿದ್ಯಾರ್ಥಿ ಮಾರ್ಷಲ್‌ಗಳಿಗೆ ಗೊತ್ತಿರುತ್ತದೆ. ಜೊತೆಗೆ, ಸಹಪಾಠಿಗಳು ತಮ್ಮ ನೋವು–ನಲಿವುಗಳನ್ನು ಮಾರ್ಷಲ್‌ಗಳ ಬಳಿ ಹಂಚಿಕೊಳ್ಳುತ್ತಾರೆ. ಇದರಿಂದ ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳ ಆಪ್ತ ಸಮಾಲೋಚನೆಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

3,500 ವಿದ್ಯಾರ್ಥಿ ಮಾರ್ಷಲ್‌ಗಳು: ‘ಬೆಂಗಳೂರಿನ ಈಶಾನ್ಯ, ಪೂರ್ವ, ದಕ್ಷಿಣ, ಆಗ್ನೇಯ, ವೈಟ್‌ಫೀಲ್ಡ್ ಹಾಗೂ ಉತ್ತರ ವಿಭಾಗದ 24 ಕಾಲೇಜುಗಳಲ್ಲಿ ‘ವಿದ್ಯಾರ್ಥಿ ಮಾರ್ಷಲ್‌’ ತಂಡಗಳಿವೆ. ಜವಾಬ್ದಾರಿ ನಾಗರಿಕರಾಗಿ 3,500 ವಿದ್ಯಾರ್ಥಿಗಳು ‘ಮಾರ್ಷಲ್‌’ ಕೆಲಸ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಬಿಡುವಿನ ವೇಳೆಯನ್ನು ಸಹಪಾಠಿಗಳ ರಕ್ಷಣೆಗೆ ಮೀಸಲಿಡುತ್ತಿದ್ದಾರೆ’ ಎಂದು ಆರೋಹಣ ಫೌಂಡೇಷನ್ ಸಹ ಸಂಸ್ಥಾಪಕ ವಿನಯ್ ಹೇಳಿದರು.

‘ಸಹಪಾಠಿಗಳು ಎದುರಿಸುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು, ಸಹಪಾಠಿಗಳು ವ್ಯಸನಿಗಳಾಗಿದ್ದರೆ ಅವರ ಪುನರ್ವಸತಿಗೆ ನೆರವು ನೀಡುವುದು. ಡ್ರಗ್ಸ್–ತಂಬಾಕು ಉತ್ಪನ್ನ ಮಾರಾಟಗಾರರ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸುವುದು, ಡ್ರಗ್ಸ್ ಹಾಗೂ ಸೈಬರ್ ಅಪರಾಧಗಳ ಬಗ್ಗೆ ಸಹಪಾಠಿಗಳಲ್ಲಿ ಜಾಗೃತಿ ಮೂಡಿಸುವುದು ವಿದ್ಯಾರ್ಥಿ ಮಾರ್ಷಲ್‌ಗಳ ಪ್ರಮುಖ ಕೆಲಸ’ ಎಂದರು.

‘ಕಾಲೇಜಿನಲ್ಲಿ ಶೇ 80ರಷ್ಟು ಜಾಗೃತಿ ಮೂಡಿಸಿದರೆ, ಶೇ 20ರಷ್ಟು ಕಾರ್ಯಕ್ರಮಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಮ್ಮಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಬೀದಿ ನಾಟಕ, ಕರಪತ್ರ ಹಂಚಿಕೆ, ಪೊಲೀಸ್ ಸಹಾಯವಾಣಿ ಪ್ರಚಾರ ಸೇರಿದಂತೆ ಎಲ್ಲ ಬಗೆಯ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ. ಜೊತೆಗೆ, ವಿದ್ಯಾರ್ಥಿ ಮಾರ್ಷಲ್‌ಗಳನ್ನು ಠಾಣೆಗಳು ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಬಳಿ ಕರೆದೊಯ್ದು ಕಾನೂನು ಅರಿವು ಸಹ ಮೂಡಿಸಲಾಗುತ್ತಿದೆ’ ಎಂದು ವಿನಯ್ ತಿಳಿಸಿದರು.

‘24 ಕಾಲೇಜುಗಳಲ್ಲಿ ಮಾತ್ರ ವಿದ್ಯಾರ್ಥಿ ಮಾರ್ಷಲ್‌ಗಳು ಇದ್ದಾರೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಪ್ರಮುಖ ಕಾಲೇಜುಗಳನ್ನು ವಿದ್ಯಾರ್ಥಿ ಮಾರ್ಷಲ್‌ಗಳ ತಂಡ ರಚಿಸಿ, ಬೆಂಗಳೂರನ್ನು ಡ್ರಗ್ಸ್ ಮುಕ್ತ ನಗರ ಮಾಡುವ ಕನಸಿದೆ’ ಎಂದು ಅವರು ಹೇಳಿದರು.

ಕೆಂಪೇಗೌಡ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿಶೇಷ ಅಭಿಯಾನದಲ್ಲಿ ‘ವಿದ್ಯಾರ್ಥಿ ಪೊಲೀಸ್ ಮಾರ್ಷಲ್‌’ ತಂಡದ ವಿದ್ಯಾರ್ಥಿನಿಯೊಬ್ಬರು ಡ್ರಗ್ಸ್ ಜಾಗೃತಿ ಫಲಕ ಪ್ರದರ್ಶಿಸಿದರು
‘ತಂಡದ ಮಾಹಿತಿಯಿಂದ ದಾಳಿ: ವಿವರ ಗೋಪ್ಯ’
‘ವಿದ್ಯಾರ್ಥಿ ಮಾರ್ಷಲ್‌ಗಳು ನೀಡಿದ್ದ ಮಾಹಿತಿ ಆಧರಿಸಿ ಡ್ರಗ್ಸ್ ಹಾಗೂ ತಂಬಾಕು ಉತ್ಪನ್ನ ಅಕ್ರಮ ಮಾರಾಟದ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಮಾಹಿತಿ ಆಧರಿಸಿ ಇದುವರೆಗೂ ಸುಮಾರು 30 ಎಫ್‌ಐಆರ್‌ಗಳು ದಾಖಲಾಗಿವೆ’ ಎಂದು ವಿನಯ್ ತಿಳಿಸಿದರು. ‘ಶಾಲೆ– ಕಾಲೇಜು ಅಕ್ಕ–ಪಕ್ಕದ ಮಳಿಗೆಗಳ ಮೇಲೂ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾರಾಟದ ಬಗ್ಗೆ ಮಾಹಿತಿ ನೀಡುವ ವಿದ್ಯಾರ್ಥಿಗಳ ವೈಯಕ್ತಿಕ ವಿವರವನ್ನು ಗೋಪ್ಯವಾಗಿರಿಸಲಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ಸಹ ವಹಿಸಲಾಗಿದೆ’ ಎಂದರು.
ಭವಿಷ್ಯ ಹಾಳಾಗದಂತೆ ಎಚ್ಚರ!
‘ಶಾಲೆ– ಕಾಲೇಜು ಹಂತದಲ್ಲಿ ಯುವಜನತೆ ದಾರಿ ತಪ್ಪಿದರೆ ಅವರ ಭವಿಷ್ಯ ಹಾಳಾಗುತ್ತದೆ. ವಿದ್ಯಾರ್ಥಿಗಳನ್ನು ತಿದ್ದಿ ಒಳ್ಳೆಯ ನಾಗರಿಕರನ್ನಾಗಿ ಮಾಡಲು ‘ಮಾರ್ಷಲ್‌’ ಪರಿಕಲ್ಪನೆ ಪರಿಚಯಿಸಲಾಗಿದೆ’ ಎಂದು  ಆರೋಹಣ ಫೌಂಡೇಷನ್ ಸಹ ಸಂಸ್ಥಾಪಕಿ ಮನೀಶಾ ಭಟ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.