ಬೆಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜುಲೈ ತಿಂಗಳಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ 54 ಪೆಡ್ಲರ್‌ಗಳನ್ನು ವಿವಿಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ‘ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್‌ಡಿಪಿಎಸ್) ಅಡಿ ಒಟ್ಟು 38 ಪ್ರಕರಣ ದಾಖಲು ಮಾಡಲಾಗಿದೆ. ನಾಲ್ವರು ವಿದೇಶಿ ಪ್ರಜೆಗಳೂ ಸೇರಿ 54 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 114 ಕೆ.ಜಿ ಗಾಂಜಾ, 176 ಗ್ರಾಂ ಅಫೀಮು, 745 ಗ್ರಾಂ ಕೊಕೇನ್, ನಾಲ್ಕು ಕೆ.ಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.
‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೂ ಬಿಗಿಯಾದ ಕ್ರಮ ಕೈಗೊಳ್ಳಲಾಗುತ್ತಿದೆ. ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಮದ್ಯ ಮಾರಾಟ, ಮಾನವ ಕಳ್ಳ ಸಾಗಣೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದವರ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ. ಒಟ್ಟು 226 ಪ್ರಕರಣ ದಾಖಲಿಸಿಕೊಂಡು, 326 ಮಂದಿ ಬಂಧಿಸಲಾಗಿದೆ’ ಎಂದು ಹೇಳಿದರು.
‘ಕೊಲೆ, ಸುಲಿಗೆ, ಕೊಲೆ ಯತ್ನ, ಹಲ್ಲೆ, ಮನೆ ಕಳವು ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ 43 ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತಲೆಮರೆಸಿಕೊಂಡಿದ್ದ ಒಂಬತ್ತು ರೌಡಿಗಳನ್ನೂ ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.