ADVERTISEMENT

ರಾಜ್ಯದಲ್ಲಿ ‘ಗಾಂಜಾ’ ಘಾಟು ಜೋರು

25,543 ಪ್ರಕರಣ ದಾಖಲು: 8,882 ಆರೋಪಿಗಳಿಗೆ ಶಿಕ್ಷೆ

ಅದಿತ್ಯ ಕೆ.ಎ.
Published 25 ಸೆಪ್ಟೆಂಬರ್ 2024, 22:38 IST
Last Updated 25 ಸೆಪ್ಟೆಂಬರ್ 2024, 22:38 IST
ಪೆಡ್ಲರ್‌ಗಳಿಂದ ಜಪ್ತಿ ಮಾಡಲಾಗಿದ್ದ ವಿವಿಧ ಮಾದರಿಯ ಡ್ರಗ್ಸ್ ಅನ್ನು ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲಾಗಿತ್ತು
ಪೆಡ್ಲರ್‌ಗಳಿಂದ ಜಪ್ತಿ ಮಾಡಲಾಗಿದ್ದ ವಿವಿಧ ಮಾದರಿಯ ಡ್ರಗ್ಸ್ ಅನ್ನು ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಾಶ ಪಡಿಸಲಾಗಿತ್ತು   

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗಾಂಜಾ ಘಾಟು ಜೋರಾಗಿದೆ. ಬೆಂಗಳೂರು ನಗರ ಅಲ್ಲದೇ ಇತರೆ ಜಿಲ್ಲಾ ಕೇಂದ್ರಗಳಿಗೂ ಡ್ರಗ್ಸ್‌ ಪೂರೈಕೆ ಆಗುತ್ತಿದೆ. ವರ್ಷದಿಂದ ವರ್ಷಕ್ಕೆ ಡ್ರಗ್ಸ್ ಮಾರಾಟ, ಪೂರೈಕೆಯ ಜಾಲ ವಿಸ್ತಾರ ಆಗಿರುವುದು ಪೊಲೀಸ್‌ ಇಲಾಖೆ ಸಂಗ್ರಹಿಸಿರುವ ಮಾಹಿತಿಯಿಂದಲೇ ಗೊತ್ತಾಗಿದೆ.

‘ಐದು ವರ್ಷಗಳಲ್ಲಿ ಮಾದಕ ದ್ರವ್ಯ ನಿಗ್ರಹ ಕಾಯ್ದೆಯ ಅಡಿ (ಎನ್‌ಡಿಪಿಎಸ್‌) ರಾಜ್ಯದಲ್ಲಿ 25,543 ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಪತ್ತೆಯಾದ ಡ್ರಗ್ಸ್ ಪೂರೈಕೆ ಪ್ರಕರಣಗಳಲ್ಲಿ 8,882 ಆರೋಪಿಗಳಿಗೆ ಶಿಕ್ಷೆ ಆಗಿದ್ದು 1,036 ಪ್ರಕರಣಗಳು ತನಿಖಾ ಹಂತದಲ್ಲಿವೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬೆಂಗಳೂರು ನಗರದಲ್ಲೇ ಅತಿಹೆಚ್ಚು ಡ್ರಗ್ಸ್ ವಹಿವಾಟು ನಡೆಯುತ್ತಿದ್ದು, ಇಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ 15,114 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮಂಗಳೂರು ನಗರ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳು ಇವೆ.

ADVERTISEMENT

‘ಚಿತ್ರದುರ್ಗ, ಮೈಸೂರು, ಹಾವೇರಿ, ವಿಜಯಪುರ, ಗದಗ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ವಿಜಯನಗರದಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಈ ಜಿಲ್ಲೆಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಡ್ರಗ್ಸ್ ಪೂರೈಕೆಗೆ ಹೊರರಾಜ್ಯಗಳ ಪೆಡ್ಲರ್‌ಗಳು ಆಸಕ್ತಿ ತೋರುತ್ತಿಲ್ಲ. ಆದರೂ, ಆ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ಡ್ರಗ್ಸ್ ಪೆಡ್ಲರ್‌ಗಳು ಹೊಸ ಮಾರ್ಗಗಳ ಮೂಲ ಡ್ರಗ್ಸ್‌ ಅನ್ನು ಗ್ರಾಹಕರು, ವಿದ್ಯಾರ್ಥಿಗಳಿಗೆ ಹಾಗೂ ಪಬ್‌ಗಳಿಗೆ ಪೂರೈಸುತ್ತಿದ್ದಾರೆ. ಚಾಕೊಲೇಟ್, ಸೋಪ್, ಬಿಸ್ಕತ್ತು ಮತ್ತಿತರ ವಸ್ತುಗಳ ಬಾಕ್ಸ್‌ಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಹೊರ ರಾಜ್ಯಗಳಿಂದ ಕರ್ನಾಟಕದ ಜಿಲ್ಲಾ ಕೇಂದ್ರಗಳಿಗೆ ಡ್ರಗ್ಸ್ ಸಾಗಿಸುತ್ತಾರೆ. ಮೊಬೈಲ್, ದೂರವಾಣಿ, ಇ–ಮೇಲ್, ಆ್ಯಪ್‌, ಸಾಮಾಜಿಕ ಮಾಧ್ಯಮಗಳ ಜತೆಗೆ ‘ಡಾರ್ಕ್‌ನೆಟ್‌’ ಮೂಲಕ ದೊಡ್ಡ ಮೊತ್ತದ ಡ್ರಗ್ಸ್‌ ದಂಧೆ ನಡೆಯುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

ನೈಸರ್ಗಿಕವಾಗಿ ಬೆಳೆಯುವ ಗಾಂಜಾ, ಅಫೀಮು ಜೊತೆಯಲ್ಲೇ ‘ಸಿಂಥೆಟಿಕ್’ ಡ್ರಗ್ಸ್ ಸಹ ರಾಜ್ಯದ ಐದು ಜಿಲ್ಲೆಗಳಿಗೆ ಹೆಚ್ಚು ಪೂರೈಕೆ ಆಗುತ್ತಿದೆ. ಮೈಸೂರು ಜಿಲ್ಲೆಯ ಹುಣಸೂರು, ಪಿರಿಯಾಪಟ್ಟಣ ಹಾಗೂ ಹಾಸನದ ಅರಕಲಗೂಡು ಭಾಗದಲ್ಲಿ ಶುಂಠಿ ಬೆಳೆ ಮಧ್ಯೆ ಗಾಂಜಾ ಬೆಳೆದು ಕೊಡಗು, ಚಿಕ್ಕಮಗಳೂರಿನ ಹೋಂ ಸ್ಟೇಗಳಲ್ಲಿ ನಡೆಯುವ ಪಾರ್ಟಿಗಳಿಗೆ ನೈಸರ್ಗಿಕ ಗಾಂಜಾ ಪೂರೈಕೆ ಮಾಡಲಾಗುತ್ತಿದೆ. 

ಆಂಧ್ರಪ್ರದೇಶ, ತೆಲಂಗಾಣದ ಪೆಡ್ಲರ್‌ಗಳು ರಾಜ್ಯಕ್ಕೆ ಬಂದು ಕಡಿಮೆ ಶ್ರಮ, ಸಮಯದಲ್ಲಿ ಹೆಚ್ಚು ದುಡ್ಡು ಗಳಿಸುತ್ತಿದ್ದಾರೆ. ಡ್ರಗ್ಸ್ ತೆಗೆದುಕೊಂಡವರು ಹಲವು ರೋಗಕ್ಕೆ ಒಳಗಾಗುತ್ತಾರೆ. ಅಪರಾಧ ಕೃತ್ಯಗಳಲ್ಲೂ ಭಾಗಿ ಆಗುತ್ತಿದ್ದಾರೆ.

‘ಇದುವರೆಗೂ ಪೊಲೀಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿತ್ತು. ಇನ್ನು ಮುಂದೆ ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾರ್ಯಪಡೆ ಅಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲಾಗುವುದು. ಕಾರ್ಯಪಡೆ ಮಾರ್ಗದರ್ಶನದಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.