ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 220 ಗ್ರಾಂ ಹಶೀಷ್ ಜಪ್ತಿ ಮಾಡಿದ್ದಾರೆ.
‘ಜಗಜೀವನ್‌ರಾಮ್ ನಗರ ನಿವಾಸಿ ಎ. ಸಂಗೀತಾ ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಟಿ.ಆರ್. ಛಾಯಾ ಬಂಧಿತರು. ಜೈಲಿನ ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಡ್ರಗ್ಸ್ ಸ್ವೀಕರಿಸುತ್ತಿದ್ದ ಕೈದಿಗಳಾದ ಲೋಹಿತ್ ಹಾಗೂ ಕಲ್ಲಪ್ಪ ಎಂಬುವರನ್ನೂ ಆರೋಪಿಗಳಾಗಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಜುಲೈ 12ರಂದು ಇಬ್ಬರೂ ಮಹಿಳೆಯರು, ಕೈದಿಗಳನ್ನು ನೋಡಲು ಜೈಲಿಗೆ ಬಂದಿದ್ದರು. ಸಾಮಾನ್ಯ ಸಂದರ್ಶನ ವಿಭಾಗ–1ರಲ್ಲಿದ್ದ ಭದ್ರತಾ ಸಿಬ್ಬಂದಿ, ಪರಿಶೀಲನೆ ನಡೆಸಿದ್ದರು. ಯುವತಿಯರ ಬಳಿ ಅನುಮಾನಾಸ್ಪದ ವಸ್ತುಗಳು ಇರುವುದು ಪತ್ತೆಯಾಗಿತ್ತು. ಮಹಿಳಾ ಸಿಬ್ಬಂದಿ, ಆರೋಪಿ ಛಾಯಾ ಹಾಗೂ ಸಂಗೀತಾ ಅವರನ್ನು ತಪಾಸಣೆಗೆ ಒಳಪಡಿಸಿದ್ದರು. ಛಾಯಾ ಗುಪ್ತಾಂಗದಲ್ಲಿ 50 ಎಂ.ಎಲ್‌ನ ಕೊಬ್ಬರಿ ಎಣ್ಣೆ ಬಾಟಲಿ ಸಿಕ್ಕಿತ್ತು. ಅದರಲ್ಲೇ ಹಶೀಷ್ ಪತ್ತೆಯಾಯಿತು. ಬಳಿಕ, ಇಬ್ಬರನ್ನೂ ಕೊಠಡಿಗೆ ಕರೆದೊಯ್ದು ಪುನಃ ಪರಿಶೀಲನೆ ನಡೆಸಿದ್ದರು. ಇಬ್ಬರ ಗುಪ್ತಾಂಗದಲ್ಲಿ ಪ್ಲಾಸ್ಟಿಕ್ ಕವರ್ ಪತ್ತೆಯಾಯಿತು. ಅದರಲ್ಲೂ ಡ್ರಗ್ಸ್ ಇರುವುದು ಗೊತ್ತಾಯಿತು. ನಂತರವೇ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು, ಠಾಣೆಗೆ ಒಪ್ಪಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.