ADVERTISEMENT

ಡ್ರಗ್ಸ್‌ ಪೆಡ್ಲರ್‌ ಸೆರೆ: ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 20:25 IST
Last Updated 21 ಫೆಬ್ರುವರಿ 2024, 20:25 IST
ಅಮೀರ್ ಖಾನ್
ಅಮೀರ್ ಖಾನ್   

ಬೆಂಗಳೂರು: ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಿಚ್ಮಂಡ್ ಟೌನ್ ನಿವಾಸಿ ಅಮೀರ್ ಖಾನ್(35) ಬಂಧಿತ ಆರೋಪಿ.

‘ಈತನ ವಿರುದ್ಧ ಮಾದಕ ವಸ್ತುಗಳ ಅಕ್ರಮ ಸಾಗಾಣೆ ತಡೆ ಕಾಯ್ದೆ (ಪಿಐಟಿ-ಎನ್‌ಡಿಪಿಎಸ್) ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕಳೆದ ಮೂರು ವರ್ಷಗಳಿಂದ ಕೇರಳ ಮತ್ತು ಆಂಧ್ರಪ್ರದೇಶದಿಂದ ಗಾಂಜಾ ಮತ್ತು ಇತರೆ ಪಾರ್ಟಿ ಡ್ರಗ್ಸ್‌‌ಗಳನ್ನು ತಂದು ನಗರದಲ್ಲಿ ನಿರ್ದಿಷ್ಟ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಈ ಹಿಂದೆ ಸಹ ಸಿಸಿಬಿ ಪೊಲೀಸರು ಆರೋಪಿಯನ್ನು ಮೂರು ಬಾರಿ ಮಾದಕ ವಸ್ತುಗಳ ಸಹಿತ ಬಂಧಿಸಿದ್ದರು. ಈತನ ವಿರುದ್ಧ ಅಶೋಕನಗರ, ಪರಪ್ಪನ ಅಗ್ರಹಾರ, ಬೇಗೂರು, ಗೋವಿಂದಪುರ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ಆರೋಪಿ ಮತ್ತೆ ಅದೇ ದಂಧೆಯಲ್ಲಿ ತೊಡಗುತ್ತಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

ಇತ್ತೀಚೆಗೆ ಅಮೃತಹಳ್ಳಿ ಠಾಣೆ ಪೊಲೀಸರು ಆರೋಪಿ ಅಮೀರ್ ಖಾನ್‌ನನ್ನು ಬಂಧಿಸಿದ್ದರು. ಈ ವೇಳೆ ಆತ ಪದೇ ಪದೇ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗುತ್ತಿರುವುದು ಪತ್ತೆಯಾಗಿತ್ತು. ಹೀಗಾಗಿ ಈತನ ವಿರುದ್ಧ ಪಿಐಟಿ– ಎನ್‌ಡಿಪಿಎಸ್ ಕಾಯ್ದೆ ಅಡಿ ಬಂಧನದಲ್ಲಿರಿಸಲು ಪೂರಕ ದಾಖಲೆಗಳೊಂದಿಗೆ ಪೊಲೀಸ್ ಕಮಿಷನರ್‌ಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕಮಿಷನರ್‌ ಆದೇಶದ ಮೇರೆಗೆ ಅಮೃತಹಳ್ಳಿ ಠಾಣೆ ಪೊಲೀಸರು ಫೆ.19ರಿಂದ ಅನ್ವಯವಾಗುವಂತೆ ಪಿಐಟಿ-ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರತಿಬಂಧಕ ಬಂಧನ ಜಾರಿಗೊಳಿಸಿದ್ದಾರೆ.

ಪದೇ ಪದೇ ಮಾದಕ ವಸ್ತುಗಳ ಮಾರಾಟ ದಂಧೆಯಲ್ಲಿ ತೊಡಗುವ ಡ್ರಗ್ಸ್‌ ಪೆಡ್ಲರ್‌ಗಳನ್ನು ನಿಯಂತ್ರಿಸಲು ಪೊಲೀಸರು ಪಿಐಟಿ-ಎನ್‌ಡಿಪಿಎಸ್ ಪ್ರಯೋಗಿಸುತ್ತಾರೆ. ಈ ಕಾಯ್ದೆ ಅಡಿ ಬಂಧಿಸಿ ಜೈಲಿಗೆ ಕಳುಹಿಸಿದರೆ ಆರೋಪಿಗೆ ಕನಿಷ್ಠ 1 ವರ್ಷ ಜಾಮೀನು ಸಿಗುವುದಿಲ್ಲ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.