ಬೆಂಗಳೂರು: ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಆಂಧ್ರಪ್ರದೇಶದಿಂದ ನಗರಕ್ಕೆ ಭಾರಿ ಪ್ರಮಾಣದ ಗಾಂಜಾ ಸಾಗಿಸುತ್ತಿದ್ದ ಕಾರೊಂದು ಪತ್ತೆಯಾಗಿದ್ದು, ಈ ವೇಳೆ ₹21 ಲಕ್ಷ ಬೆಲೆ ಬಾಳುವ 41 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.
‘ದೂರವಾಣಿ ನಗರದ ಬಳಿ ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಕಾರೊಂದು ಬರುತ್ತಿತ್ತು. ಅನುಮಾನದಿಂದ ವಾಹನ ತಪಾಸಣೆ ನಡೆಸಿದಾಗ ಭಾರಿ ಪ್ರಮಾಣದ ಗಾಂಜಾ ಪತ್ತೆಯಾಯಿತು’ ಎಂದು ಮಹದೇವಪುರ ವಲಯದ ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ತಿಳಿಸಿದರು.
‘ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಈ ಪೈಕಿ ಅನಂತಪುರ ಜಿಲ್ಲೆಯ ಕೆ.ವೀರೇಶ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾರಿನ ಚಾಲಕ ರಾಜೇಶ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ. ಆರೋಪಿ ವಿರುದ್ಧ ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ (ಎನ್‌ಡಿಪಿಎಸ್) ಪ್ರಕರಣ ದಾಖಲಿಸಲಾಗಿದೆ’ ಎಂದರು.
‘ಆರೋಪಿಗಳು ವಿಶಾಖಪಟ್ಟಣದ ವಿವಿಧ ಕಡೆಗಳಿಂದ ಗಾಂಜಾ ತರಿಸಿಕೊಂಡು ಅನಂತಪುರ ಜಿಲ್ಲೆಯಲ್ಲಿ ದಾಸ್ತಾನು ಮಾಡಿಕೊಳ್ಳುತ್ತಿದ್ದರು. ಅಲ್ಲಿಂದ ಬೆಂಗಳೂರಿಗೆ ಸಾಗಿಸಿ, ಇಲ್ಲಿರುವ ವ್ಯಕ್ತಿಗಳ ಮೂಲಕ ಗಾಂಜಾ ಮಾರುತ್ತಿದ್ದರು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.