ಬೆಂಗಳೂರು: ಪ್ರತ್ಯೇಕ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿರುವ ರಾಮಮೂರ್ತಿನಗರ, ಬಸವನಗುಡಿ ಹಾಗೂ ಸಂಪಿಗೆಹಳ್ಳಿ ಠಾಣೆಯ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗಾಂಜಾ ಮಾರಾಟ ಮಾಡುತ್ತಿದ್ದ ಫ್ರೇಜರ್‌ಟೌನ್ ನಿವಾಸಿ ವಾಸೀಂ ಪಾಷಾ(45) ಹಾಗೂ ರಾಮಮೂರ್ತಿನಗರದ ನಿವಾಸಿ ಹರೀಶ್ (24) ಎಂಬುವವರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ₹1 ಲಕ್ಷ ಮೌಲ್ಯದ 2 ಕೆ.ಜಿ 182 ಗ್ರಾಂ. ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
‘ಠಾಣಾ ವ್ಯಾಪ್ತಿಯ ಕೆ.ಆರ್.ಪುರ ರೈಲ್ವೆ ನಿಲ್ದಾಣದ ಬಳಿ ಪೊಟ್ಟಣಗಳಲ್ಲಿ ಗಾಂಜಾ ತುಂಬಿ ಮಾರಾಟ ಮಾಡುತ್ತಿದ್ದರು. ಅಲ್ಲಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
ಗಾಂಜಾ ಮಾರಾಟ ಮಾಡುತ್ತಿದ್ದ ಶಾಮಣ್ಣ ಗಾರ್ಡನ್‌ನ ಬಾಪೂಜಿ ನಗರದ ನಿವಾಸಿ ಅರ್ಬಾಜ್ ಶೇಕ್ (29) ಎಂಬಾತನನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ 3 ಕೆ.ಜಿ 590 ಗ್ರಾಂ. ಗಾಂಜಾ, ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಆಟೊವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಸಂಪಿಗೆಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಎಜೆಬಿಜೆ ಮೈದಾನದ ಬಳಿ ಹೆಗ್ಡೆ ನಗರದ ನಿವಾಸಿ ತಾಜ್‌ಮುಲ್ ಶರೀಫ್‌ನನ್ನು(32) ಬಂಧಿಸಿದ್ದಾರೆ.
ಆರೋಪಿಯಿಂದ 1ಕೆ.ಜಿ 32 ಗ್ರಾಂ. ಗಾಂಜಾ, ಮೊಬೈಲ್ ಹಾಗೂ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಸಾರಾಯಿಪಾಳ್ಯದ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಹೆಚ್ಚಿನ ಬೆಲೆಗೆ ಶರೀಫ್ ಮಾರಾಟ ಮಾಡುತ್ತಿದ್ದ. ಸಾರಾಯಿಪಾಳ್ಯದ ನಿವಾಸಿ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.