ಬೆಂಗಳೂರು: ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಸತತ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ವಿಭಾಗದ ಪೊಲೀಸರು, ಪ್ರಸಕ್ತ ವರ್ಷದ ಜನವರಿ ಆರಂಭದಿಂದ ಜೂನ್ ಅಂತ್ಯದವರೆಗೆ 6,283 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
‘2023ರಲ್ಲಿ ಮದ್ಯಸೇವಿಸಿ ವಾಹನ ಚಾಲನೆ ಮಾಡಿದ 7,053 ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಉದ್ದೇಶದಿಂದ ವಿಶೇಷ ಕಾರ್ಯಾಚರಣೆ ನಡೆಯುತ್ತಿದ್ದು, ಈ ವರ್ಷ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ’ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಹೇಳಿದ್ದಾರೆ.
ಪೊಲೀಸರು 1,263 ಸವಾರರ ಚಾಲನಾ ಪರವಾನಗಿಯನ್ನು ವಶಕ್ಕೆ ಪಡೆದಿದ್ದಾರೆ. ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ ಪ್ರಕರಣಗಳಲ್ಲಿ ನೋಂದಣಿ ಪ್ರಮಾಣಪತ್ರಗಳನ್ನು (ಆರ್.ಸಿ) ಅಮಾನತುಗೊಳಿಸಲು ಶಿಫಾರಸು ಮಾಡಲಾಗುತ್ತಿದೆ. ಐದು ಆರ್.ಸಿ ಗಳನ್ನು ಅಮಾನತು ಮಾಡಲು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಿದ್ದಾರೆ.
ವ್ಹೀಲಿ ಉಪಟಳ ಹೆಚ್ಚಳ:
ಸಂಚಾರ ವಿಭಾಗದ ಪೊಲೀಸರ ಅಂಕಿ ಅಂಶಗಳ ಪ್ರಕಾರ, 2023ರಲ್ಲಿ ನಗರದಲ್ಲಿ 216 ವ್ಹೀಲಿ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ವ್ಹೀಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ವ್ಹೀಲಿ ಮಾಡುತ್ತಿದ್ದ 225 ಮಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. 93 ವಾಹನ ಸವಾರರ ಆರ್.ಸಿ ಅಮಾನತಿಗಾಗಿ ಆಯಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಿದ್ದು, ಅದರಲ್ಲಿ 26 ಆರ್.ಸಿಗಳನ್ನು ಅಮಾನತುಗೊಳಿಸಲಾಗಿದೆ.
ವ್ಹೀಲಿ ನಡೆಸಿದ ಒಂಬತ್ತು ವಾಹನ ಸವಾರರ ಚಾಲನಾ ಪರವಾನಗಿಯನ್ನು (ಡಿ.ಎಲ್) ಸಹ ಅಮಾನತುಗೊಳಿಸಲಾಗಿದೆ.
ಗಂಭೀರ ಸ್ವರೂಪದ 431, ಗಂಭೀರ ಸ್ವರೂಪದ್ದಲ್ಲದ 2,015 ಅಪಘಾತಗಳು ಜೂನ್ 30ರವರೆಗೆ ನಗರದಲ್ಲಿ ವರದಿಯಾಗಿವೆ. 258 ಚಾಲಕರ ಚಾಲನಾ ಪರವಾನಗಿಯನ್ನು ಅಮಾನತಿಗೆ ಕಳುಹಿಸಲಾಗಿದೆ. ಈ ವರ್ಷ ಗಂಭೀರ ಅಪಘಾತಗಳಿಗೆ ಕಾರಣವಾದ 95 ಮಂದಿಯ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.