ADVERTISEMENT

ಪಾನಮತ್ತನಾಗಿ ಚಾಲನೆ: ಬಿಬಿಎಂಪಿ ಚಾಲಕನಿಗೆ ದಂಡ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 21:26 IST
Last Updated 16 ಆಗಸ್ಟ್ 2022, 21:26 IST
   

ಬೆಂಗಳೂರು: ಪಾನಮತ್ತನಾಗಿ ಚಾಲನೆ ಮಾಡಿದ್ದ ಆರೋಪದಡಿ ಬಿಬಿಎಂಪಿ ಚಾಲಕ ಶಿವಶಂಕರ್ ಅವರಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದು, ಜಂಟಿ ಆಯುಕ್ತರು ಬಳಸುತ್ತಿದ್ದ ಕಾರನ್ನೂ ಜಪ್ತಿ ಮಾಡಿದ್ದಾರೆ.

‘ಜಂಟಿ ಆಯುಕ್ತ ನಾಗರಾಜ್ ಬಳಕೆಗೆ ನೀಡಿದ್ದ ಕಾರನ್ನು ಶಿವಶಂಕರ್ ಚಲಾಯಿಸುತ್ತಿದ್ದರು. ರಾಜರಾಜೇಶ್ವರಿ ನಗರದ ಪ್ರವೇಶ ದ್ವಾರದ ಬಳಿ ಸೋಮವಾರ ತಡರಾತ್ರಿ ಅಪಘಾತ ಮಾಡಿದ್ದ ಶಿವಶಂಕರ್ ಅವರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಮದ್ಯದ ಅಂಶ ಕಂಡುಬಂದಿದ್ದರಿಂದ ಕಾರು ಜಪ್ತಿ ಮಾಡಿ, ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ನೋಟಿಸ್ ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಅವರೊಬ್ಬರೇ ಕಾರಿನಲ್ಲಿದ್ದರೆಂದು ಗೊತ್ತಾಗಿದೆ. ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದರಿಂದ, ಮತ್ತೊಂದು ಕಾರಿಗೆ ಡಿಕ್ಕಿ ಆಗಿತ್ತು.’

ADVERTISEMENT

ದಾಖಲಾಗದ ದೂರು: ‘ಅಪಘಾತದಿಂದಾಗಿ ಬಿಬಿಎಂಪಿ ಕಾರು ಹಾಗೂ ಸಾರ್ವಜನಿಕರ ಕಾರು ಎರಡಕ್ಕೂ ಹಾನಿ ಆಗಿದೆ. ಯಾರೊಬ್ಬರಿಗೂ ಗಾಯವಾಗಿಲ್ಲ. ಅಪಘಾತದ ಬಗ್ಗೆ ಸಹ ಯಾರೂ ದೂರು ನೀಡಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯಾರ್ಥಿ ಕೊಲೆ: ಆರೋಪಿಗಳು ವಶಕ್ಕೆ
ಕಾಡುಗೊಂಡನಹಳ್ಳಿ (ಕೆ.ಜೆ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಅರ್ಬಾಜ್ (18) ಎಂಬುವರ ಕೊಲೆ ಪ್ರಕರಣ ಸಂಬಂಧ ಏಳು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ಪ್ರಾವಿನ್ಸ್ ಕಾಲೇಜಿನಲ್ಲಿ ಪಿಯು ಎರಡನೇ ವರ್ಷದಲ್ಲಿ ಓದುತ್ತಿದ್ದ ಅರ್ಬಾಜ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ನಡೆದಿದ್ದ ಗಲಾಟೆ ಕೊಲೆಗೆ ಕಾರಣವೆಂಬ ಸುಳಿವು ಆಧರಿಸಿ ಆರೋಪಿ ಸಾದ್‌, ಇತರರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.