ಬೆಂಗಳೂರು: ಪಾನಮತ್ತರಾಗಿ ಶಾಲಾ ವಾಹನ ಚಾಲನೆ ಮಾಡುವ ಚಾಲಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ಪೊಲೀಸರು, ಒಂಬತ್ತು ತಿಂಗಳಲ್ಲಿ 108 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಿಕ್ಕಿಬಿದ್ದ ಚಾಲಕರಿಗೆ ದಂಡ ವಿಧಿಸುವುದರ ಜತೆಗೆ ಚಾಲನಾ ಪರವಾನಗಿ (ಡಿ.ಎಲ್) ಅಮಾನತು ಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಅಲ್ಲದೇ, 679 ಶಾಲಾ ವಾಹನಗಳು ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದ್ದು, ಈ ಸಂಬಂಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಬಸ್‌ಗಳ ಮಾಲೀಕರು ಹಾಗೂ ಶಾಲೆಗಳ ಮುಖ್ಯಸ್ಥರಿಗೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಚಾಲಕರಿಗೆ ₹ 10 ಸಾವಿರದವರೆಗೂ ದಂಡ ವಿಧಿಸಲಾಗಿದ್ದು, ಶಾಲಾ ವಾಹನ ಚಾಲಕರಿಂದ ₹1.36 ಲಕ್ಷ ದಂಡ ವಸೂಲು ಮಾಡಲಾಗಿದೆ.
ಹಲವು ಖಾಸಗಿ ಶಾಲಾ ವಾಹನ ಚಾಲಕರು ಕೆಲಸದ ಅವಧಿಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು, ಸಿಗ್ನಲ್ ಜಂಪ್, ಅತಿವೇಗ ಸೇರಿದಂತೆ ಹಲವು ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.
ನಗರದ ವಿವಿಧ ಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು, ಬೆಳಿಗ್ಗೆ 7 ರಿಂದ 9.30ರ ಅವಧಿಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ವಾಹನಗಳನ್ನು ತಡೆದು ಆಲ್ಕೊಮೀಟರ್ ಉಪಕರಣದ ಮೂಲಕ ತಪಾಸಣೆ ಮಾಡಿದ್ದರು. ಈ ವೇಳೆ ಹಲವು ಚಾಲಕರು ಮದ್ಯ ಸೇವಿಸಿರುವುದು ದೃಢಪಟ್ಟಿದೆ.
ಚಾಲಕರ ವಿರುದ್ಧ ಪಾನಮತ್ತ ಚಾಲನೆ ಮತ್ತು ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ತಪಾಸಣೆ ವೇಳೆ ಕಾರ್ಯಕ್ಷಮತೆ ಪ್ರಮಾಣ ಪತ್ರ (ಎಫ್‌ಸಿ) ಹೊಂದಿರದ ಹಲವು ವಾಹನಗಳನ್ನು ಜಪ್ತಿ ಮಾಡಿ, ಸಾರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.
‘ಆಟೊ, ಮಾರುತಿ ವ್ಯಾನ್, ಟೆಂಪೊ ಟ್ರ್ಯಾವಲರ್, ಮಿನಿ ಬಸ್‌ಗಳಲ್ಲಿ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯುತ್ತಿರುವುದು ತಪಾಸಣೆ ವೇಳೆ ಕಂಡು ಬಂದಿದೆ. ಆಟೊಗಳಲ್ಲಿ ಹತ್ತಾರು ಮಕ್ಕಳನ್ನು ನಿಲ್ಲಲು ಸ್ಥಳಾವಕಾಶ ಇಲ್ಲದಂತೆ ತುಂಬಿಕೊಂಡು ಕೊಂಡೊಯ್ಯುತ್ತಾರೆ. ಮಕ್ಕಳಿಗಿಂತ ಹೆಚ್ಚು ತೂಕದ ಶಾಲಾ ಬ್ಯಾಗ್‌ಗಳು ಆಟೊಗಳ ಎರಡೂ ಬದಿಯಲ್ಲಿ ತೂಗಾಡುತ್ತಿರುತ್ತವೆ. ಶಾಲಾ ವಾಹನದಲ್ಲಿ ಸೀಟುಗಳ ಸಂಖ್ಯೆಯಷ್ಟೇ ಮಕ್ಕಳನ್ನು ಕರೆದೊಯ್ಯಬೇಕು.
ಆದರೆ, ಸೀಟುಗಳ ಪ್ರಮಾಣಕ್ಕಿಂತ ಎರಡು, ಮೂರು ಪಟ್ಟು ಹೆಚ್ಚಿನ ಮಕ್ಕಳನ್ನು ಹತ್ತಿಸಿಕೊಂಡು ಸಾಗುತ್ತಾರೆ. ಕೆಲ ಶಾಲೆಗಳಲ್ಲಿ ಸ್ವಂತ ವಾಹನಗಳು ಇಲ್ಲದ ಕಾರಣ ಹೊರಗುತ್ತಿಗೆ ನೀಡುತ್ತಾರೆ. ವಾಹನ ನೋಂದಣಿ ಪತ್ರ, ಕಾರ್ಯಕ್ಷಮತೆ ಪ್ರಮಾಣ ಪತ್ರ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಬೇಕು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಶಾಲಾ ಆಡಳಿತ ಮಂಡಳಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನಿಸಬೇಕು. ಲಕ್ಷಾಂತರ ರೂಪಾಯಿ ವಂತಿಗೆ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಬಸ್ ಚಾಲನೆಗೂ ಮುನ್ನ ಚಾಲಕ ಮದ್ಯ ಸೇವಿಸಿದ್ದಾನೆಯೇ ಎಂಬುದನ್ನು ಪರೀಕ್ಷಿಸಬೇಕು’ ಎಂದು ಹಿರಿಯ ಅಧಿಕಾರಿಯೊಬ್ಬರು ಸಲಹೆ ನೀಡಿದರು.
‘ನಿರಂತರ ಕಾರ್ಯಾಚರಣೆ ನಡೆಯುತ್ತಿದ್ದು, ಪಾನಮತ್ತ ಚಾಲಕರು ಪತ್ತೆಯಾಗುತ್ತಿದ್ದಾರೆ. ಕೆಲಸದ ಅವಧಿಯಲ್ಲಿ ಚಾಲಕರು ಮದ್ಯ ಸೇವಿಸಿದ್ದಾರೆಯೇ ಇಲ್ಲವೇ ಎಂಬುದರ ಬಗ್ಗೆ ಶಾಲಾ ಆಡಳಿತ ಮಂಡಳಿ ಪರಿಶೀಲನೆ ನಡೆಸುತ್ತಿಲ್ಲ. ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
- ಪರವಾನಗಿ ರದ್ದತಿಗೆ ಮನವಿ
ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾತನಾಡಿ ‘ನಿಯಮಿತ ತಪಾಸಣೆ ವೇಳೆ ಕೆಲಸದ ಅವಧಿಯಲ್ಲಿ ಶಾಲಾ ವಾಹನ ಚಾಲಕರು ಮದ್ಯ ಸೇವಿಸಿ ಸಿಕ್ಕಿಬಿದ್ದಿದ್ದಾರೆ. ಹಿಂದಿನ ರಾತ್ರಿ ಮದ್ಯ ಸೇವಿಸಿರುವುದಾಗಿ ಚಾಲಕರು ವಿಚಾರಣೆ ವೇಳೆ ಹೇಳಿದ್ದಾರೆ. ಆದರೆ ಆಲ್ಕೊಮೀಟರ್ ಉಪಕರಣದಲ್ಲಿ ತಪಾಸಣೆ ಮಾಡಿದಾಗ ಮದ್ಯ ಸೇವಿಸಿರುವುದು ಗೊತ್ತಾಗಿದೆ. ಕೆಲಸದ ಒತ್ತಡ ಸೇರಿದಂತೆ ನಾನಾ ಕಾರಣಗಳ ನೆಪದಲ್ಲಿ ಮದ್ಯ ಸೇವಿಸಿದ್ದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು. ‘ಸಾರಿಗೆ ಇಲಾಖೆ ಚಾಲನಾ ಪರವಾನಗಿ ಅಮಾನತುಗೊಳಿಸಿದ್ದರೂ ಮದ್ಯ ಸೇವಿಸಿ ಚಾಲನೆ ಮಾಡಿ ಸಿಕ್ಕಿಬೀಳುತ್ತಲೇ ಇದ್ದಾರೆ. ಹಾಗಾಗಿ ವಾಹನಗಳ ಪರವಾನಗಿಯನ್ನು ರದ್ದುಗೊಳಿಸುವಂತೆ ಆರ್‌ಟಿಒಗೆ ಮನವಿ ಮಾಡಲಾಗುವುದು. ಸಂಚಾರ ನಿಯಮ ಮತ್ತು ಸುರಕ್ಷಿತ ವಾಹನ ಚಾಲನೆಯ ಬಗ್ಗೆ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.