ADVERTISEMENT

ಕಸದಿಂದ ರಸ: ವಿದ್ಯುತ್ ಉತ್ಪತ್ತಿ, ತ್ಯಾಜ್ಯದಿಂದಲೂ ಮುಕ್ತಿ

ರಾಜ್ಯದ ಮೊದಲ ಘಟಕ: ನಗರದ ಒಣ ತ್ಯಾಜ್ಯ ವಿಲೇವಾರಿಗೆ ಮಾರ್ಗ; ಉಪ ಚುನಾವಣೆಯ ಫಲಿತಾಂಶದ ನಂತರ ಉದ್ಘಾಟನೆ?

ಗಾಣಧಾಳು ಶ್ರಿಕಂಠ
Published 18 ನವೆಂಬರ್ 2024, 22:23 IST
Last Updated 18 ನವೆಂಬರ್ 2024, 22:23 IST
ಬಿಡದಿಯಲ್ಲಿರುವ ತಾಜ್ಯದಿಂದ ವಿದ್ಯುತ್ ಉತ್ಪಾದಿಸುವ(ಡಬ್ಲ್ಯುಟಿಇ) ಸ್ಥಾವರ
ಬಿಡದಿಯಲ್ಲಿರುವ ತಾಜ್ಯದಿಂದ ವಿದ್ಯುತ್ ಉತ್ಪಾದಿಸುವ(ಡಬ್ಲ್ಯುಟಿಇ) ಸ್ಥಾವರ   

ಬೆಂಗಳೂರು: ಒಂದೆಡೆ ನಗರದ ಸ್ವಚ್ಛತೆ ಇನ್ನೊಂದೆಡೆ ವಿದ್ಯುತ್‌ ಉತ್ಪಾದನೆ. ಹೀಗೆ ಎರಡೆರಡು ಉಪಯೋಗವಿರುವ ಒಣ ಕಸದಿಂದ ವಿದ್ಯುತ್‌ ಉತ್ಪಾದಿಸುವ ಸ್ಥಾವರ ಬಿಡದಿಯಲ್ಲಿ ಸಿದ್ಧಗೊಂಡಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಬಳಿಕ ಸ್ಥಾವರ ಲೋಕಾರ್ಪಣೆ ಮಾಡಲು ಇಂಧನ ಇಲಾಖೆ ತಯಾರಿ ಮಾಡಿಕೊಂಡಿದೆ.

ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್‌) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಜಂಟಿಯಾಗಿ ಕಸದಿಂದ ವಿದ್ಯುತ್‌ ಉತ್ಪಾದಿಸುವ (ವೇಸ್ಟ್ ಟು ಎನರ್ಜಿ–ಡಬ್ಲ್ಯುಟಿಇ) ಯೋಜನೆಯನ್ನು ಕಾರ್ಯರೂಪಕ್ಕೆ ತಂದಿವೆ.

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಯಾಗಬೇಕು. ಒಣ ತ್ಯಾಜ್ಯದ ಸಮಸ್ಯೆಗೆ ಮುಕ್ತಿ ನೀಡಬೇಕೆಂಬ ಬಿಬಿಎಂಪಿಯ ಹಲವು ದಶಕಗಳ ಕನಸು ಈ ಸ್ಥಾವರದ ಮೂಲಕ ನನಸಾಗುತ್ತಿದೆ. ಯೋಜನೆ ಅನುಷ್ಠಾನಕ್ಕೆ ಪಾಲಿಕೆಯೊಂದಿಗೆ ಕೈಜೋಡಿಸಲು ಕೆಲವು ಕಂಪನಿಗಳು ಆಸಕ್ತಿ ತೋರಿದರೂ ಆ ನಂತರ ಹಿಂದೆ ಸರಿದ ಕಾರಣ ಸರ್ಕಾರಿ ಸ್ವಾಮ್ಯದ ಕೆಪಿಸಿಎಲ್‌ ಸಹಕಾರದಿಂದ ಸ್ಥಾವರ ನಿರ್ಮಾಣವಾಗಿದೆ.

ಮನೆಗಳಿಂದ ಹಸಿ ತ್ಯಾಜ್ಯ, ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬಿಬಿಎಂಪಿ ಸಂಗ್ರಹಿಸುತ್ತಿದೆ. ಹಸಿ ತ್ಯಾಜ್ಯ ಗೊಬ್ಬರವಾಗಿ ರೈತರ ಜಮೀನು ಸೇರುತ್ತಿದೆ. ಆದರೆ, ಒಣ ತ್ಯಾಜ್ಯಕ್ಕೆ ಪರಿಹಾರ ಸಿಗದೇ ಭೂ ಭರ್ತಿಯಲ್ಲಿ ರಾಶಿಯಾಗುತ್ತಿದೆ. ನಗರ ಎದುರಿಸುತ್ತಿರುವ ಈ ‘ಒಣ ಕಸ’ದ ಸಮಸ್ಯೆಗೆ ಡಬ್ಲ್ಯಟಿಇ ಪರಿಹಾರ ನೀಡಲಿದೆ. ಈಗಾಗಲೇ ಬಿಬಿಎಂಪಿ, ಪ್ರತಿ ವಾರ್ಡ್‌ನಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಆರಂಭಿಸಿದೆ. ಆ ಘಟಕಗಳಿಂದ ನೇರವಾಗಿ ಡಬ್ಲ್ಯುಟಿಇಗೆ ಒಣ ತ್ಯಾಜ್ಯ ರವಾನೆಯಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತ್ಯಾಜ್ಯ ಮುಕ್ತಿ ಜೊತೆಗೆ ಶಕ್ತಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ ಸುಮಾರು 5,800 ಟನ್ ಕಸ ಉತ್ಪತ್ತಿಯಾಗುತ್ತದೆ. ಅದರಲ್ಲಿ ಅಂದಾಜು ಎರಡು ಸಾವಿರ ಟನ್ ಒಣ ಕಸ ಇರುತ್ತದೆ. ಭೂ ಭರ್ತಿಗೆ(ಲ್ಯಾಂಡ್‌ ಫಿಲ್‌) ಹೋಗುವ ಕಸ ಈಗ ವಿದ್ಯುತ್‌ ಉತ್ಪಾದನೆಗೆ ಹೋಗುತ್ತಿದೆ. ಬಯಲಲ್ಲಿ ಸುಡುವ ತ್ಯಾಜ್ಯ, ಸ್ಥಾವರದಲ್ಲಿ ವೈಜ್ಞಾನಿಕವಾಗಿ ವಿಲೇವಾರಿಗೊಳ್ಳುತ್ತಿದೆ. ಇದರಿಂದ ತ್ಯಾಜ್ಯ ಸಮಸ್ಯೆಗೆ ಮುಕ್ತಿಯೂ, ಶಕ್ತಿಯ (ವಿದ್ಯುತ್‌) ಉತ್ಪಾದನೆಯೂ ಏಕಕಾಲಕ್ಕೆ ಆಗಲಿದೆ.

‘ಡಬ್ಲ್ಯುಟಿಇ ನಗರದಲ್ಲಿ ಉತ್ಪತ್ತಿಯಾಗುವ ಒಟ್ಟು ಒಣ ತ್ಯಾಜ್ಯದ ಶೇ 25 ಭಾಗವನ್ನು ಸಂಸ್ಕರಿಸಿ, ವಿದ್ಯುತ್ ಆಗಿ ಪರಿವರ್ತಿಸುವ ಗುರಿ ಇದೆ. ಈಗಾಗಲೇ ಆರು ತಿಂಗಳಿನಿಂದ ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಬಿಬಿಎಂಪಿ ನಿತ್ಯ 400 ಟನ್‌ ಒಣ ತ್ಯಾಜ್ಯ ಪೂರೈಸುತ್ತಿದೆ. ಉತ್ಪಾದಿಸುತ್ತಿರುವ ವಿದ್ಯುತ್ ಅನ್ನು ಬೆಸ್ಕಾಂ ಗ್ರಿಡ್‌ಗೆ ಪೂರೈಸಲಾಗುತ್ತಿದೆ’ ಎಂದು ಕೆಪಿಸಿಎಲ್‌ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

600 ಟನ್‌ ಸಂಸ್ಕರಣಾ ಸಾಮರ್ಥ್ಯ

ಬಿಡದಿ ಸ್ಥಾವರದಲ್ಲಿ ನಿತ್ಯ 600 ಟನ್‌ ಒಣ ತ್ಯಾಜ್ಯ ಸಂಸ್ಕರಿಸಬಹುದು. 11.5 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿದೆ. ನಿತ್ಯ 0.27 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಬಹುದು.

‘ಪ್ರಾಯೋಗಿಕ ಪ್ರಕ್ರಿಯೆಯಲ್ಲಿ ಒಮ್ಮೊಮ್ಮೆ ತ್ಯಾಜ್ಯದ ಪ್ರಮಾಣ ಕಡಿಮೆಯಾಗಿ ಅಥವಾ ಪೂರ್ಣ ಒಣಗಿದ ತ್ಯಾಜ್ಯ ಲಭ್ಯವಾಗದೇ 5 ರಿಂದ 7 ಮೆಗಾವಾಟ್ ವಿದ್ಯುತ್ ಉತ್ಪತ್ತಿ ಮಾಡಲಾಗಿದೆ. ಬಹಳ ದಿನ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಿದ್ದೇವೆ’ ಎಂದು ಸ್ಥಾವರದ ಅಧಿಕಾರಿಗಳು ಮಾಹಿತಿ ನೀಡಿದರು.

‘ಸ್ಥಾವರದಲ್ಲಿ ವಿದ್ಯುತ್‌ ಉತ್ಪಾದನಾ ವೆಚ್ಚ ತುಸು ಹೆಚ್ಚು. ಪ್ರತಿ ಯೂನಿಟ್‌ಗೆ ಸುಮಾರು ₹ 8 ಖರ್ಚು ಆಗುತ್ತದೆ. ಆದರೆ, ನಗರದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಹಾಯವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಿಡದಿಯ 15 ಎಕರೆ ಪ್ರದೇಶದಲ್ಲಿರುವ ಡಬ್ಲ್ಯಟಿಇ ಘಟಕ, ರಾಜ್ಯದ ಮೊದಲ ‘ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರ‘ವಾಗಿದೆ. ಅಂದಾಜು ₹260 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಕೆಪಿಸಿಎಲ್‌ ಮತ್ತು ಬಿಬಿಎಂಪಿ ಜಂಟಿಯಾಗಿ ವೆಚ್ಚ ಭರಿಸಿವೆ. ಘಟಕದ ನಿರ್ವಹಣೆ ಜವಾಬ್ದಾರಿಯನ್ನು ನಿಗಮವೇ ವಹಿಸಿಕೊಂಡಿದೆ. ಜಪಾನ್‌ ದೇಶದ ‘ಹಿಟಾಚಿ’ ಕಂಪನಿ ತಂತ್ರಜ್ಞಾನವನ್ನು ನೀಡಿದೆ. ‘ಇಸ್ಜೆಕ್‌(ಐಎಸ್‌ಜಿಇಸಿ)ಕಂಪನಿ’ ಸ್ಥಾವರದ ನಿರ್ಮಾಣ ಕಾರ್ಯದಲ್ಲಿ ನೆರವಾಗಿದೆ.

ADVERTISEMENT
ಕೆ.ಜೆ. ಜಾರ್ಜ್
ಒಣ ತ್ಯಾಜ್ಯದ ರಾಶಿ (ಸಾಂದರ್ಭಿಕ ಚಿತ್ರ)
ಒಣ ತ್ಯಾಜ್ಯದ ರಾಶಿ (ಸಾಂದರ್ಭಿಕ ಚಿತ್ರ)

Highlights - ಮುಖ್ಯಾಂಶಗಳು * ನಗರದ ಒಣ ತ್ಯಾಜ್ಯ ಸಮಸ್ಯೆಗೆ ಪರಿಹಾರ * 600 ಟನ್ ತ್ಯಾಜ್ಯ ಭೂಭರ್ತಿ ಪ್ರದೇಶ ಕಡಿತಗೊಳ್ಳುತ್ತದೆ * ತ್ಯಾಜ್ಯಮುಕ್ತ 'ಸ್ವಚ್ಛ ನಗರ'ದ ಪರಿಕಲ್ಪನೆಗೆ ಪೂರಕ. * ನಗರ ವ್ಯಾಪ್ತಿಯಲ್ಲಿ ಇನ್ನಷ್ಟು ಘಟಕ ಸ್ಥಾಪನೆಗೆ ಚಿಂತನೆ * ವಿದ್ಯುತ್ ಉತ್ಪಾದನಾ ಸ್ಥಾವರವು ಕಾರ್ಖಾನೆ ಪರವಾನಗಿ ಪಡೆದಿದೆ  * ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆಗೆ ಅನುಮತಿ  * 2024ರ ಸೆಪ್ಟೆಂಬರ್ 23ರಂದು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ

’ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಸ್ಥಾವರದಲ್ಲಿ(ಡಬ್ಲ್ಯುಟಿಇ) ಪ್ರಾಯೋಗಿಕವಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲಾಗುವುದು.
– ಕೆ.ಜೆ.ಜಾರ್ಜ್‌ ಇಂಧನ ಸಚಿವ
‘ಡಬ್ಲ್ಯುಟಿಇ’ಯಿಂದ ಈಗ ಸ್ಥಾವರದಲ್ಲಿ ಒಣ ಕಸ ಸಂಸ್ಕರಣೆಗೊಂಡು ವಿದ್ಯುತ್ ಉತ್ಪಾದನೆಯಾಗುತ್ತಿದೆ. ನಗರದಲ್ಲಿ ಇನ್ನೂ ಮೂರು ಕಡೆ ಇಂಥ ಸ್ಥಾವರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆದಿದೆ.
ತುಷಾರ್ ಗಿರಿನಾಥ್,ಮುಖ್ಯ ಆಯುಕ್ತರು, ಬಿಬಿಎಂಪಿ

ಡಬ್ಲ್ಯುಟಿಇ ಕಾರ್ಯವೈಖರಿ

ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯಾದಂತೆ ಇಲ್ಲಿಯೂ ಒಣ ತ್ಯಾಜ್ಯ ಉರಿದು ಶಾಖ ಉತ್ಪತ್ತಿಯಾಗಿ ಅದರಿಂದ ಕೊಳವೆಗಳಲ್ಲಿ ಹರಿಯುವ ನೀರು ಕಾಯಿಸಿ ಅದರಿಂದ ಉತ್ಪತ್ತಿಯಾಗುವ ಹಬೆ(ಸ್ಟೀಮ್)ಯನ್ನು ಟರ್ಬೈನ್‌ಗೆ ಕಳುಹಿಸಿ ವಿದ್ಯುತ್ ಉತ್ಪತ್ತಿ ಮಾಡಲಾಗುತ್ತದೆ. ಕಲ್ಲಿದ್ದಲಿನ ಬದಲಿಗೆ ಇಲ್ಲಿ ಒಣ ತ್ಯಾಜ್ಯ ಬಳಸಲಾಗುತ್ತದೆ.  ‘ಚಾಲನಾ ಪೂರ್ವ ಚಟುವಟಿಕೆಗಳು ಮುಗಿದಿವೆ. ಈ ತಿಂಗಳಾಂತ್ಯಕ್ಕೆ ಸ್ಥಾವರದ ಸಾಮರ್ಥ್ಯ ಪರೀಕ್ಷೆ(ಪಿಜಿ ಟೆಸ್ಟ್‌) ಪೂರ್ಣಗೊಳ್ಳಲಿದೆ. ನಂತರ ಪೂರ್ಣ ಪ್ರಮಾಣದಲ್ಲಿ ಚಟುವಟಿಕೆ ಆರಂಭವಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬೂದಿ ಮರು ಬಳಕೆ ಸಾಧ್ಯತೆ

‘ಡಬ್ಲ್ಯಟಿಇ ಸ್ಥಾವರದಲ್ಲಿ ಒಣ ತ್ಯಾಜ್ಯ ಸುಟ್ಟನಂತರ ಶೇ 15 ರಿಂದ 20ರಷ್ಟು ಬೂದಿ ಬರುತ್ತದೆ. ಇದನ್ನು ಕಾಂಕ್ರೀಟ್ ಉತ್ಪನ್ನಗಳನ್ನು ತಯಾರಿಸಲು ಮಿಶ್ರ ಮಾಡಬಹುದು. ಜಪಾನ್‌ನಂತಹ ರಾಷ್ಟ್ರಗಳಲ್ಲಿ  ನಮ್ಮ ದೇಶ ಬೇರೆ ರಾಜ್ಯಗಳಲ್ಲಿ ಬೂದಿಯನ್ನು ರಸ್ತೆ ನಿರ್ಮಾಣ ಕಾಮಗಾರಿಗೆ ಬಳಸುತ್ತಿದ್ದಾರೆ. ಇದೂ ಸೇರಿದಂತೆ ಕಾಂಕ್ರೀಟ್‌ ಉತ್ಪನ್ನಗಳ ತಯಾರಿಕೆಯಲ್ಲಿ ಬೂದಿ ಬಳಸುವ ಕುರಿತು ಪರಿಶೀಲಿಸುವಂತೆ ಕೆಲವು ಕಂಪನಿಗಳಿಗೆ ಕೇಳಿದ್ದೇವೆ. ಜೊತೆಗೆ ಈ ಬೂದಿಯ ಗುಣಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ’ ಎಂದು ಕೆಪಿಸಿಎಲ್‌ ಕಾರ್ಯಪಾಲಕ ಎಂಜಿನಿಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.