ADVERTISEMENT

ಪರಿಶಿಷ್ಟರ ಹಣ ಅನ್ಯ ಉದ್ದೇಶಕ್ಕೆ: ಡಿಎಸ್‌ಎಸ್‌ ಒಕ್ಕೂಟದ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:50 IST
Last Updated 20 ಜುಲೈ 2024, 15:50 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ‘ಗ್ಯಾರಂಟಿ’ ಯೋಜನೆಗಳಿಗೆ ಬಳಸುವುದನ್ನು ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ನಿರ್ಧರಿಸಿದೆ.

‘ಪರಿಶಿಷ್ಟ ಜಾತಿ ವಿಶೇಷ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಯೋಜನೆಗಳಡಿ (ಟಿಎಸ್‌ಪಿ) ಮೀಸಲಿಟ್ಟ ಹಣದಲ್ಲಿ ಗ್ಯಾರಂಟಿಗೆ 2023–24ನೇ ಸಾಲಿನಲ್ಲಿ ₹11,000 ಕೋಟಿ ಬಳಸಿದೆ. 2024–25ನೇ ಸಾಲಿನಲ್ಲಿ ₹14,000 ಕೋಟಿ ಬಳಸುತ್ತಿದೆ. ಈ ಯೋಜನೆಗಳನ್ನು ನಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ಪರಿಶಿಷ್ಟರಿಗೆ ದ್ರೋಹ ಬಗೆಯುತ್ತಿದೆ’ ಎಂದು ಒಕ್ಕೂಟದ ನಾಯಕರಾದ ಮಾವಳ್ಳಿ ಶಂಕರ್‌, ಇಂದೂಧರ ಹೊನ್ನಾಪುರ ಸುದ್ದಿಗೋಷ್ಠಿಯಲ್ಲಿ ಶನಿವಾರ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಭಾರತ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದ್ದ ಆರ್‌ಎಸ್‌ಎಸ್‌–ಬಿಜೆಪಿಯನ್ನು ಸೋಲಿಸಬೇಕು ಎಂಬ ಕಾರಣಕ್ಕೆ ನಾವು ಸಮಾವೇಶ ಮಾಡಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದೆವು. ಪರಿಶಿಷ್ಟರ ಬೇಡಿಕೆಗಳನ್ನು ಈಡೇರಿಸುವ ಭರವಸೆಗಳನ್ನು ಆಗ ಕಾಂಗ್ರೆಸ್‌ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಿಡಿದು ಎಲ್ಲ ಸಚಿವರು, ಶಾಸಕರು ಹೇಳಿದಂತೆ ನಡೆದುಕೊಂಡಿಲ್ಲ. ಪರಿಶಿಷ್ಟರ ಬೆನ್ನಿಗೆ ಚೂರಿ ಹಾಕಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಎಸ್‌ಸಿ/ಎಸ್‌ಟಿ ಬ್ಯಾಕ್‌ಲಾಗ್‌ ಉದ್ಯೋಗಗಳನ್ನು ಭರ್ತಿ ಮಾಡಿ ಎಂದು ಹೈಕೋರ್ಟ್‌ ಸೂಚನೆ ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ಯಾರಂಟಿಗೆ ಬಳಸಿದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನವನ್ನು ಹಿಂತಿರುಗಿಸಬೇಕು. ಕಾಯ್ದೆಯ ‘7ಡಿ’ ಸೆಕ್ಷನ್‌ ರದ್ದು ಮಾಡಿದಂತೆ ‘7ಸಿ’ ಸೆಕ್ಷನ್‌ ಅನ್ನೂ ರದ್ದು ಮಾಡಬೇಕು. ಈ ಅನುದಾನವನ್ನು ಎಸ್‌ಸಿ, ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಬಿಟ್ಟು ಬೇರೆ ಯಾವುದಕ್ಕೂ ಬಳಸದಂತೆ ಕ್ರಮ ಕೈಗೊಳ್ಳಬೇಕು. ಕಾವಲು ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಹೊರಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ರೋಸ್ಟರ್ ಪದ್ಧತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಈ ಸಮುದಾಯಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೆ ವಿಧಿಸಿರುವ ಆದಾಯ ಮತ್ತು ಅಂಕಗಳ ಮಿತಿಯನ್ನು ರದ್ದು ಮಾಡಬೇಕು. ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವ ದಲಿತ ವಿದ್ಯಾರ್ಥಿಗಳ ಪೂರ್ಣ ವೆಚ್ಚ ಭರಿಸಬೇಕು. ವಸತಿ ಶಾಲೆಗಳ ಪ್ರವೇಶಕ್ಕೆ ನಿಗದಿಪಡಿಸಿರುವ ಪ್ರವೇಶ ಪರೀಕ್ಷೆಗಳನ್ನು ರದ್ದು ಮಾಡಿ ಸಾಮಾಜಿಕ, ಆರ್ಥಿಕ ಮಾನದಂಡದ ಮೇಲೆ ಪ್ರವೇಶ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಮತ್ತು ಸಮಾಜ ಕಲ್ಯಾಣ ಸಚಿವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು. ಎಸ್‌ಸಿ–ಎಸ್‌ಟಿ ಸಮುದಾಯಗಳ ಸಚಿವರಿಗೆ ಮನವಿ ನೀಡಲಾಗುವುದು. ಅದಕ್ಕೆ ಸ್ಪಂದಿಸದೇ ಇದ್ದರೆ ಹಂತ ಹಂತವಾಗಿ ಚಳವಳಿ ರೂಪಿಸಲಾಗುವುದು. ಆಗಸ್ಟ್‌ನಲ್ಲಿ ಮೊದಲ ಹಂತದ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟದ ಮುಖಂಡರಾದ ವಿ. ನಾಗರಾಜ್‌, ಎನ್‌. ವೆಂಕಟೇಶ್‌, ಮರಿಯಪ್ಪ ಹಳ್ಳಿ ಎಚ್ಚರಿಸಿದರು.

ಮಹದೇವಪ್ಪ ರಾಜೀನಾಮೆಗೆ ಆಗ್ರಹ

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ ಸ್ಥಗಿತಗೊಳಿಸಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಖಂಡಿಸಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಆರ್. ಮೋಹನ್‌ರಾಜ್, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್.ಸಿ. ಮಹದೇವಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಪಿಎಚ್.ಡಿ ಹಾಗೂ ಉನ್ನತ ವ್ಯಾಸಂಗ ಮಾಡಲು ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ಸಹಾಯಧನಕ್ಕೂ ಕತ್ತರಿ ಹಾಕಲಾಗಿದೆ. ಆದ್ದರಿಂದ, ಮಹದೇವಪ್ಪ ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.