ADVERTISEMENT

ಆರೋಗ್ಯಕ್ಕೆ ಮಾರಕ ‘ದುಬೈ ಗಿಡ’

ರಸ್ತೆಗಳಲ್ಲಿ ಪೋಷಣೆ, ಅರಣ್ಯ ಇಲಾಖೆ, ಬಿಬಿಎಂಪಿ, ಬಿಡಿಎ ನರ್ಸರಿಗಳಲ್ಲೂ ಸಾವಿರಾರು ಗಿಡ

ಆರ್. ಮಂಜುನಾಥ್
Published 4 ಜೂನ್ 2024, 23:58 IST
Last Updated 4 ಜೂನ್ 2024, 23:58 IST
ಕೆಂಗೇರಿ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ನೆಡಲಾಗಿರುವ ಕೊನೊಕಾರ್ಪಸ್‌ ಗಿಡಗಳು
ಕೆಂಗೇರಿ ಮುಖ್ಯರಸ್ತೆಯ ಮಧ್ಯಭಾಗದಲ್ಲಿ ನೆಡಲಾಗಿರುವ ಕೊನೊಕಾರ್ಪಸ್‌ ಗಿಡಗಳು   

ಬೆಂಗಳೂರು: ಮಳೆ ಪರಿಸರವನ್ನು ಹಾಳು ಮಾಡುವ, ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ, ಯುಎಇ ಹಾಗೂ ದೇಶದ ಎರಡು ರಾಜ್ಯಗಳಲ್ಲಿ ನಿಷೇಧವಾಗಿರುವ ಕೊನೊಕಾರ್ಪಸ್‌ (Conocarpus) ಗಿಡ ನಗರದಲ್ಲೆಡೆ ಹರಡಿಕೊಳ್ಳುತ್ತಿದೆ.

ಮಾನವನ ಆರೋಗ್ಯಕ್ಕೆ ಮಾರಕ ಹಾಗೂ ಈ ಗಿಡಗಳು ಹೆಚ್ಚಾಗುವ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಬರದ ಪರಿಸ್ಥಿತಿ ಉಂಟಾಗುತ್ತದೆ ಎಂದು ಗುಜರಾತ್‌, ತೆಲಂಗಾಣ ರಾಜ್ಯದಲ್ಲಿ 2023ರಲ್ಲಿ ಕೊನೊಕಾರ್ಪಸ್‌ ಗಿಡವನ್ನು ನಿಷೇಧಿಸಲಾಗಿದೆ. ಗುಜರಾತ್‌ನಲ್ಲಿ ಈ ಗಿಡ–ಮರಗಳನ್ನು ಬುಡಸಹಿತ ತೆರವುಗೊಳಿಸಿ, ಸುಟ್ಟುಹಾಕಲಾಗಿದೆ.

‘ದುಬೈ ಗಿಡ’ ಎಂದೂ ಕರೆಯಲಾಗುವ ಹಾನಿಕಾರ ಕೊನೊಕಾರ್ಪಸ್‌ ಗಿಡವನ್ನು ಅರಣ್ಯ ಇಲಾಖೆ, ಬಿಬಿಎಂಪಿ, ಬಿಡಿಎ ನಗರದ ಬಹುತೇಕ ಪ್ರದೇಶಗಳಲ್ಲಿ ನೆಟ್ಟಿದೆ ಹಾಗೂ ನೆಡುತ್ತಿದೆ. ನಗರದ ಪ್ರಮುಖ ಮುಖ್ಯರಸ್ತೆ, ಹೊರವರ್ತುಲ ರಸ್ತೆಗಳು, ಕೇಂದ್ರ ಭಾಗ ರಸ್ತೆಗಳ ಮಧ್ಯಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಬಿಬಿಎಂಪಿ ಹಾಗೂ ಬಿಡಿಎ ಕೊನೊಕಾರ್ಪಸ್‌ ಗಿಡವನ್ನು ಬೆಳೆಸುತ್ತಿದೆ. ಬಿಬಿಎಂಪಿ ತನ್ನ ಉದ್ಯಾನಗಳಲ್ಲೂ ಕೊನೊಕಾರ್ಪಸ್‌ ಅನ್ನು ಹೆಚ್ಚಾಗಿ ನೆಟ್ಟಿದೆ.

ADVERTISEMENT

ಬಿಡಿಎ, ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಸಾವಿರಾರು ಸಸಿಗಳನ್ನೂ ಬೆಳಸಲಾಗುತ್ತಿದೆ. ಅತಿವೇಗದಲ್ಲಿ ಬೆಳೆಯುವ ಕೊನೊಕಾರ್ಪಸ್‌ಗೆ ಹೆಚ್ಚಿನ ಆರೈಕೆ ಬೇಕಾಗುವುದಿಲ್ಲ. ಬದಲಿಗೆ ಬೇಗ ಹಸಿರು ಹರಡಿಕೊಂಡು, ಬೇರೂರುತ್ತದೆ. ಈ ಕಾರಣದಿಂದ ಸರ್ಕಾರಿ ಇಲಾಖೆಗಳು ಈ ಗಿಡವನ್ನು ಹೆಚ್ಚು ನೆಡುತ್ತಿದ್ದಾರೆ. ಹೆಚ್ಚು ಹಸಿರನ್ನು ತೋರಿಸುವ ಉದ್ದೇಶದಿಂದ ನಾಗರಿಕರು, ಪರಿಸರಕ್ಕೆ ಮಾರಕವಾಗಿರುವ ಗಿಡಗಳನ್ನು ಅಧಿಕಾರಿಗಳು ಪೋಷಿಸುತ್ತಿದ್ದಾರೆ.

‘ಕೊನೊಕಾರ್ಪಸ್‌ ಗಿಡದ ದುಷ್ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ವೇಗವಾಗಿ ಬೆಳೆಯುತ್ತದೆ ಎಂದು ನೆಟ್ಟಿದ್ದೇವೆ. ನರ್ಸರಿಗಳಲ್ಲೂ ಗಿಡಗಳು ಇವೆ. ಇದು ಅಂತರ್ಜಲವನ್ನು ಹೆಚ್ಚು ಹೀರಿಕೊಳ್ಳುತ್ತದೆ ಹಾಗೂ ಉಸಿರಾಟದ ಮೇಲೆ ಪರಿಣಾಮ ಬೀಳುತ್ತದೆ ಎಂದು ಇತ್ತೀಚೆಗೆ ತಜ್ಞರು ನಮ್ಮ ಗಮನಕ್ಕೆ ತಂದಿದ್ದಾರೆ. ಇದರ ಬೀಜಗಳು ಹೆಚ್ಚಾಗಿದ್ದು, ಅದರಿಂದಲೇ ಗಿಡಗಳು ಹುಟ್ಟಿಕೊಳ್ಳುತ್ತವೆ. ಇದು ಮಾರಕ ಎಂಬುದು ನಮಗೆ ಇದೀಗ ಅರಿವಾಗಿದೆ. ಈ ಗಿಡಗಳನ್ನು ನಿಷೇಧಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ತಿಳಿಸಿದರು.

ಯಲಹಂಕ ಮುಖ್ಯರಸ್ತೆಯ ಮಧ್ಯಭಾಗದಲ್ಲಿ  ಬಿಬಿಎಂಪಿ ಪೋಷಿಸುತ್ಗಿರುವ ಕೊನೊಕಾರ್ಪಸ್‌ ಗಿಡಗಳು
ಕೊನೊಕಾರ್ಪಸ್‌ ಗಿಡ
ದುಷ್ಪರಿಣಾಮವೇನು?
ಕೊನೊಕಾರ್ಪಸ್‌ ಗಿಡ– ಮರ ಅತಿಹೆಚ್ಚು ಇಂಗಾಲದ ಜೊತೆಗೆ ಮಾನವನ ದೇಹ ಮೇಲೆ ದುಷ್ಪರಿಣಾಮ ಬೀರುವ ಮಾರಕ ಆಮ್ಲವನ್ನು ಹೊರಸೂಸುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ.  ನೆಗಡಿ ಕೆಮ್ಮು ಆಸ್ತಮಾ ಸೇರಿದಂತೆ ಅಲರ್ಜಿಯಂತಹ ಕಾಯಿಲೆಗಳು ಉದ್ಭವಿಸುತ್ತದೆ. ಸ್ಥಳೀಯ ಕೀಟ ಪಕ್ಷಿ ಹಾಗೂ ಪ್ರಾಣಿಗಳ ಆರೋಗ್ಯಕ್ಕೂ ಹಾನಿಕಾರಕ. ಚಳಿಗಾಲದಲ್ಲಿ ಈ ಗಿಡ–ಮರದಿಂದ ಹೆಚ್ಚು ದುಷ್ಪರಿಣಾಮವಾಗುತ್ತದೆ. ಅತಿಹೆಚ್ಚು ಬೇರು ಬಿಡುವುದರಿಂದ ನೆಲದಡಿಯಲ್ಲಿರುವ ಕೇಬಲ್‌ ಹಾಗೂ ಕೊಳವೆ ಮಾರ್ಗಗಳಿಗೂ ಅಧಿಕ ಹಾನಿಯಾಗುತ್ತದೆ.
‘ಪರಿಸರ ದಿನವೆಂದು ನೆಡಬೇಡಿ’
‘ಬಿಬಿಎಂಪಿ ಅರಣ್ಯ ಇಲಾಖೆಗಳ ನರ್ಸರಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಮಾರಕ ಕೊನೊಕಾರ್ಪಸ್‌ ಗಿಡಗಳನ್ನು ಪರಿಸರ ದಿನದ ಸಂದರ್ಭದಲ್ಲಿ ಸಂಘ–ಸಂಸ್ಥೆಗಳು ನಾಗರಿಕರು ನೆಡಬಾರದು. ಸ್ಥಳೀಯ ಗಿಡಗಳಿಗೆ ಮಾತ್ರ ಆದ್ಯತೆ ನೀಡಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊನೊಕಾರ್ಪಸ್‌ ಗಿಡಗಳನ್ನು ನೆಡುತ್ತಿರುವ ಬಗ್ಗೆ ಅರಣ್ಯ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಈ ಗಿಡಗಳಿಂದಾಗುವ ಮಾರಕಗಳನ್ನು ಅವರಿಗೆ ವಿವರಿಸಲಾಗಿದ್ದು ಅದನ್ನು ನಿಷೇಧಿಸುವ ಕುರಿತಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ. ನೆಟ್ಟಿರುವ ಗಿಡಗಳನ್ನು ತೆಗೆಯಬೇಕು. ಅದಕ್ಕೆ ಮುನ್ನ ಇನ್ನು ಮುಂದೆ ಈ ಗಿಡಗಳನ್ನು ನೆಡದಂತೆ ನೋಡಿಕೊಳ್ಳಬೇಕು’ ಎಂದು ‘ಟ್ರೀ ಡಾಕ್ಟರ್’ ವಿಜಯ್‌ ನಿಶಾಂತ್‌ ಹೇಳಿದರು. ‘ತೆರವುಗೊಳಿಸಿ...’ ‘ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾಗೂ ನೈಸರ್ಗಿಕವಾಗಿ ಕೀಟ–ಪಕ್ಷಿಗಳಿಗೆ ಮಾರಕವಾಗಿರುವ ಇತರೆಡೆ ನಿಷೇಧವಾಗಿರುವ ಕೊನೊಕಾರ್ಪಸ್‌ ಗಿಡವನ್ನು ಬೆಳೆಸಬಾರದು. ನೆಟ್ಟು ಬೆಳೆಯಲಾಗುತ್ತಿರುವ ಮರ–ಗಿಡಗಳನ್ನು ತೆರವುಗೊಳಿಸಲೂ ಕ್ರಮ ಕೈಗೊಳ್ಳಬೇಕು’ ಎಂದು ಸಸ್ಯ ತಜ್ಞ ಎನ್‌.ಎಂ. ಗಣೇಶ್‌ ಬಾಬು ಆಗ್ರಹಿಸಿದರು.
‘ಕ್ರಮ ಕೈಗೊಳ್ಳುತ್ತೇವೆ...’
‘ಕೊನೊಕಾರ್ಪಸ್‌ ಗಿಡಗಳ ದುಷ್ಪರಿಣಾಮ ಬಗ್ಗೆ ತಜ್ಞರು ನಮ್ಮ ಗಮನಕ್ಕೆ ತಂದಿದ್ದಾರೆ. ಗಿಡ ಹೆಚ್ಚು ಹಸಿರಾಗಿದೆ ಎಂದು ರಸ್ತೆಗಳ ಮಧ್ಯಭಾಗದಲ್ಲಿ ಬೆಳೆಸಲಾಗುತ್ತದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚರ್ಚೆ ನಡೆಸಿ ಮಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಬಿಡಿಎ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.