ADVERTISEMENT

ಅಂಗಾಂಗ ದಾನಿಗಳ ಕೊರತೆ: ಯಕೃತ್ತು ವಿಭಾಗಿಸಿ ಇಬ್ಬರಿಗೆ ಕಸಿ

ಅಂಗಾಂಗ ದಾನಿಗಳ ಕೊರತೆಯಿಂದಾಗಿ ಸ್ಪರ್ಶ್ ಆಸ್ಪತ್ರೆಯ ವೈದ್ಯರ ಕ್ರಮ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 0:28 IST
Last Updated 5 ಸೆಪ್ಟೆಂಬರ್ 2024, 0:28 IST
.
.   

ಬೆಂಗಳೂರು: ಅಂಗಾಂಗ ದಾನಿಗಳ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ವೈದ್ಯರು, ವ್ಯಕ್ತಿಯೊಬ್ಬರ ಯಕೃತ್ತನ್ನು (ಲಿವರ್) ವಿಭಾಗಿಸಿ ಇಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಯಕೃತ್ತು ಕಸಿ ತಜ್ಞ ಡಾ.ಮಹೇಶ ಗೋಪಸೆಟ್ಟಿ, ‘ಅಪಘಾತದಲ್ಲಿ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕನ ಯಕೃತ್ತನ್ನು ಬಳಸಿ ಈ ಕಸಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಯುವಕನ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕುಟುಂಬ ಸದಸ್ಯರ ಸಮ್ಮತಿ ಮೇರೆಗೆ ಆತನ ಅಂಗಾಂಗವನ್ನು ದಾನವಾಗಿ ಪಡೆಯಲಾಯಿತು. ಯುವಕನ ಯಕೃತ್ತನ್ನು ಎರಡು ಭಾಗವಾಗಿಸಿ, ಒಂದು ಭಾಗವನ್ನು 53 ವರ್ಷದ ಪುರುಷನಿಗೆ, ಇನ್ನೊಂದು ಭಾಗವನ್ನು 59 ವರ್ಷದ ಮಹಿಳೆಗೆ ಕಸಿ ಮಾಡಲಾಯಿತು. ಇದರಿಂದ ಇಬ್ಬರೂ ಚೇತರಿಸಿಕೊಳ್ಳಲು ಸಾಧ್ಯವಾಯಿತು’ ಎಂದು ವಿವರಿಸಿದರು. 

ADVERTISEMENT

ಕಸಿ ಚಿಕಿತ್ಸೆ ಸಲಹೆಗಾರ ಡಾ.ಗೌತಮ್ ಕುಮಾರ್, ‌‘ಅಲ್ಪ ಸಮಯದಲ್ಲಿಯೇ ಮೂರು ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕಾದ ಸವಾಲು ನಮ್ಮ ಮುಂದಿತ್ತು. ದಾನಿಯ ಅಂಗಾಂಗವನ್ನು ಏಕಕಾಲದಲ್ಲಿ ಇಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡುವುದು ಸುಲಭವಲ್ಲ. ವೈದ್ಯಕೀಯ ತಂಡದ ನೆರವಿನಿಂದ ಇದು ಸಾಕಾರವಾಯಿತು’ ಎಂದರು.

‘ಅಂಗಾಂಗ ದಾನದ ಬಗ್ಗೆ ಜಾಗೃತಿ ಹೆಚ್ಚಬೇಕಿದೆ. ಹಲವಾರು ಮಂದಿ ಸಮಯಕ್ಕೆ ಸರಿಯಾಗಿ ಅಂಗಾಂಗ ಸಿಗದೆ ಮೃತಪಡುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು. 

ಆಸ್ಪತ್ರೆಗಳ ಸಮೂಹದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜೋಸೆಫ್ ಪಸಂಘ, ಯಶವಂತಪುರ ಸ್ಪರ್ಶ್ ಆಸ್ಪತ್ರೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ರಾಹುಲ್ ತಿವಾರಿ ಹಾಗೂ ಕಸಿಗೆ ಒಳಗಾದವರು ಉಪಸ್ಥಿತರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.