ಬೆಂಗಳೂರು: ಸದಾ ನಗುತ್ತಲೇ ಇರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡರಿಗೆ ಚುನಾವಣಾ ಫಲಿತಾಂಶ ಕೂಡ ಆನಂದ ಹೆಚ್ಚಾಗುವಂತೆ ಮಾಡಿದೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಸಂಸದರಾಗಿ ಭಾರಿ ಮತಗಳ ಅಂತರದಿಂದ ಅವರು ಚುನಾಯಿತರಾದರು.
ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಅವರ ವಿರುದ್ಧ 1,47,518 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‌ನಲ್ಲಿ ನಡೆದ ಮತ ಎಣಿಕೆ ವೇಳೆ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಸದಾನಂದಗೌಡ ಮುನ್ನಡೆ ಕಾಯ್ದುಕೊಂಡರು.
ಮಧ್ಯಾಹ್ನ 12ರ ವೇಳೆಗೆ 80 ಸಾವಿರ ಮತಗಳ ಅಂತರವನ್ನು ದಾಟಿದರು. ಅಂತಿಮವಾಗಿ ಸಂಜೆ 5.30ರ ವೇಳೆಗೆ 20 ಸುತ್ತಿನ ಮತ ಎಣಿಕೆ ಮುಗಿದು ಫಲಿತಾಂಶ ಘೋಷಣೆ ಆಯಿತು. ಸಮೀಪ ಸ್ಪರ್ಧಿ ಕೃಷ್ಣ ಬೈರೇಗೌಡ ಅವರು 6,76,982 ಮತಗಳಿಗೆ ತೃಪ್ತಿ ಪಡಬೇಕಾಯಿತು.
ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ನಗರ ಘಟಕದ ಅಧ್ಯಕ್ಷ ಮುನಿರಾಜು ಹಾಗೂ ಕೆಲ ಬೆಂಬಲಿಗರು ಸದಾನಂದಗೌಡ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಅಭಿನಂದಿಸಿದರು.
ಒಟ್ಟಿಗೆ ಕುಳಿತಿದ್ದ ಪ್ರತಿಸ್ಪರ್ಧಿಗಳು: ಎಣಿಕಾ ಕೇಂದ್ರದಲ್ಲಿ ಡಿ.ವಿ. ಸದಾನಂದಗೌಡ ಮತ್ತು ಕೃಷ್ಣ ಬೈರೇಗೌಡ ಅವರು ಕೆಲಹೊತ್ತು ಒಟ್ಟಿಗೆ ಕುಳಿತು ಪರಸ್ಪರ ಚರ್ಚೆಯಲ್ಲಿ ಮುಳುಗಿದ್ದರು. ಅಭ್ಯರ್ಥಿಗಳಿಗಾಗಿ ಹಾಕಿದ್ದ ಆಸನದ ಮೇಲೆ ಕುಳಿತಿದ್ದ ಇಬ್ಬರೂ, ನಗುನಗುತ್ತಲೇ ಮಾತನಾಡಿಕೊಂಡು ಕಾಲ ಕಳೆದರು.ಸದಾನಂದಗೌಡ ಅವರು ಗೆಲ್ಲುವುದು ಖಚಿತವಾಗುತ್ತಿದ್ದಂತೆ ಕೃಷ್ಣ ಬೈರೇಗೌಡ ಎಣಿಕಾ ಕೇಂದ್ರದಿಂದ ಹೊರಟರು.
ತೆರೆಯದ ಬೀಗ: ಮತಯಂತ್ರ ಇಟ್ಟಿದ್ದ ಸ್ಟ್ರಾಂಗ್ ರೂಂ ಒಂದರ ಬೀಗ ತೆರೆದುಕೊಳ್ಳಲಿಲ್ಲ. ಕೆಲ ಹೊತ್ತು ಪ್ರಯತ್ನ ಪಟ್ಟ ಅಧಿಕಾರಿಗಳು ಅಂತಿಮವಾಗಿ ಬೀಗ ಒಡೆದು ಬಾಗಿಲು ತೆರೆದರು.
ಸುಳಿಯದ ಜನ
ಮತ ಎಣಿಕಾ ಕೇಂದ್ರದತ್ತ ಅಭ್ಯರ್ಥಿಗಳ ಬೆಂಬಲಿಗರೂ ಸುಳಿಯಲಿಲ್ಲ. ಮತ ಎಣಿಕಾ ಸಿಬ್ಬಂದಿ, ಸಹಾಯಕ ಸಿಬ್ಬಂದಿ, ಎಣಿಕಾ ಏಜೆಂಟರು, ಪೊಲೀಸ್ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಆವರಣದಲ್ಲಿ ಅಲ್ಲಲ್ಲಿ ಕಂಡರು.
ಹೊರ ಭಾಗದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿಕೊಂಡು ನಿಂತಿದ್ದರು. ಆದರೆ, ಫಲಿತಾಂಶದ ವಿವರ ಪಡೆದುಕೊಳ್ಳಲು ಯಾರೊಬ್ಬರೂ ಅತ್ತ ಬರಲಿಲ್ಲ. ಅಭ್ಯರ್ಥಿಗಳ ಬೆಂಬಲಿಗರು ಕಾಣಲಿಲ್ಲ.
‘ಮೋದಿ ಶ್ರಮದ ಪ್ರತಿಫಲ’
‘ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಶ್ರಮಕ್ಕೆ ಫಲ ಸಿಕ್ಕಿದೆ’ ಎಂದು ಡಿ.ವಿ. ಸದಾನಂದಗೌಡ ಹೇಳಿದರು.
‘ದೇಶದಲ್ಲಿ ಜನ ಬಿಜೆಪಿ ಪರ ಇದ್ದಾರೆ. ಭ್ರಷ್ಟಾಚಾರ ರಹಿತವಾಗಿ ಕೇಂದ್ರದಲ್ಲಿ ಆಡಳಿತ ನಡೆಸಿದ್ದೇವೆ. ರಾಜ್ಯದ ಎಲ್ಲಾ ನಾಯಕರು, ಕಾರ್ಯಕರ್ತರು ಉತ್ತಮ
ವಾಗಿ ಕೆಲಸ ಮಾಡಿದ್ದಾರೆ. ಎಲ್ಲರ ಶ್ರಮದ ಫಲವಾಗಿ ನಾನು ಗೆದ್ದಿದ್ದೇನೆ. ಮಾಧ್ಯಮಗಳೂ ಸಹಕಾರ ನೀಡಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.