ADVERTISEMENT

ಇ-ಖಾತಾ ಕಡ್ಡಾಯ; ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ: ಎಂ.ಜಿ. ರಾಜಗೋಪಾಲ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 19:37 IST
Last Updated 18 ಅಕ್ಟೋಬರ್ 2024, 19:37 IST
ಖಾತಾ
ಖಾತಾ   

ಬೆಂಗಳೂರು: ‘ರಾಜ್ಯ ಸರ್ಕಾರವು ಪೂರ್ವ ತಯಾರಿ ಇಲ್ಲದೆ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಇಂತಹ ನಿಯಮದಿಂದಾಗಿ ರಾಜ್ಯದಲ್ಲಿನ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೀಡಾಗಿವೆ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಹೇಳಿದ್ದಾರೆ.

‘ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬಿ-ಖಾತಾ ಮತ್ತು ಕಂದಾಯ ನಿವೇಶನಗಳಿಗೆ ಇ–ಖಾತಾ ಇರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಶೇ 90ರಷ್ಟು ಆಸ್ತಿಗಳಿಗೆ ನಿಯಮಗಳ ಅನ್ವಯ ಇ-ಖಾತಾ ನೀಡುತ್ತಿಲ್ಲ. ಅಲ್ಲದೆ, ತಂತ್ರಾಂಶದಲ್ಲಿನ ದೋಷದಿಂದಾಗಿ ಇ-ಖಾತಾದಲ್ಲಿನ ಲೋಪದೋಷಗಳನ್ನು ಸರಿಪಡಿಸಲು ವಿಳಂಬವಾಗುತ್ತಿದೆ. ಆದ್ದರಿಂದ ಈ ಹಿಂದೆ ಅನುಸರಿಸುತ್ತಿದ್ದ ಪದ್ದತಿಯಂತೆ ಲಭ್ಯವಿರುವ ಖಾತಾಗಳ, ದಾಖಲೆಗಳ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆ ನಿರ್ವಹಿಸಬೇಕು’ ಎಂದು ಪತ್ರಿಕಾ ಹೇಳಿಕೆ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಪಂಚಾಯಿತಿ ಕಚೇರಿಗಳಲ್ಲಿ ಭೌತಿಕ ಕಡತದ (ಕಾಗದ) ಖಾತಾಗಳನ್ನು ಇ-ಖಾತಾಗೆ ಪರಿವರ್ತಿಸುವಲ್ಲಿ ವಿಳಂಬವಾಗಿರುವ ಹಲವಾರು ನಿದರ್ಶನಗಳಿವೆ. ಇದರಿಂದಾಗಿ ಅನೇಕ ಉದ್ದಿಮೆದಾರರು ಹಲವು ವರ್ಷಗಳಿಂದ ತಮ್ಮ ಸ್ವತ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆರ್ಥಿಕ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗದೆ, ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದ ನಿಯಮಗಳಿಂದ ಮತ್ತು ಪಂಚಾಯಿತಿ ಆಡಳಿತ ವೈಫಲ್ಯದಿಂದ ಆಗುವ ವಿಳಂಬಕ್ಕೆ ಉದ್ದಿಮೆದಾರರನ್ನು ಹೊಣೆ ಮಾಡುವುದು ಸರಿಯಾದ ಕ್ರಮವಲ್ಲ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಇ–ಖಾತಾ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕು’ ಎಂದು ಆಗ್ರಹಿಸಿದದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.