ADVERTISEMENT

ಇ–ಬುಕ್‌ಗೆ ಮಣೆ: ಪ್ರಕಾಶಕರ ವಿರೋಧ

ನಗರದ 5 ವಲಯ ಗ್ರಂಥಾಲಯಗಳ ಡಿಜಿಟಲೀಕರಣ, ಕನ್ನಡ ಪುಸ್ತಕೋದ್ಯಮಕ್ಕೆ ಮಾರಕ?

ಎಸ್.ರವಿಪ್ರಕಾಶ್
Published 8 ಡಿಸೆಂಬರ್ 2019, 19:30 IST
Last Updated 8 ಡಿಸೆಂಬರ್ 2019, 19:30 IST
ಇ–ಬುಕ್‌
ಇ–ಬುಕ್‌   

ಬೆಂಗಳೂರು: ನೂರಾರು ಸಮಸ್ಯೆಗಳ ನಡುವೆ ಸಿಲುಕಿ ಹೈರಾಣಾಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಮುದ್ರಿತ ಪುಸ್ತಕಗಳನ್ನು ಕಡೆಗಣಿಸಿ, ಡಿಜಿಟಲೀಕರಣ ಮತ್ತು ಇ–ಬುಕ್‌ಗಳಿಗೆ (ವಿದ್ಯುನ್ಮಾನ ಪುಸ್ತಕ) ಹೆಚ್ಚು ಅನುದಾನ ನಿಗದಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇತ್ತೀಚೆಗೆ ನಡೆದ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಈ ಸಂಬಂಧ ತೆಗೆದುಕೊಂಡ ನಿರ್ಣಯ ಪ್ರಕಾಶಕರು ಮತ್ತು ಲೇಖಕರ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಗ್ರಂಥಾಲಯ ಇಲಾಖೆಯ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಲೇಖಕರು ಮತ್ತು ಪ್ರಕಾಶಕರ ಜತೆ ಚರ್ಚೆ ನಡೆಸಿ ಆ ವ್ಯವಸ್ಥೆಗೆ ಹೊಂದಿಕೊಳ್ಳಲು ಕನಿಷ್ಠ ಒಂದು ವರ್ಷ ಸಮಯ ಕೊಡ ಬೇಕಿತ್ತು ಎಂದೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ತೆಗೆದುಕೊಂಡ ತೀರ್ಮಾ ನದ ಅನ್ವಯ ಡಿಜಿಟಲೀಕರಣ ಮತ್ತು ಇ– ಬುಕ್‌ಗಾಗಿ ಬೆಂಗಳೂರಿನ 5 ವಲಯಗಳಿಗೆ ₹ 10 ಕೋಟಿ ಅಂದರೆ, ಪ್ರತಿ ವಲಯಕ್ಕೆ ತಲಾ ₹2 ಕೋಟಿ ಮೀಸಲಿಡಲು ತೀರ್ಮಾನಿಸಲಾಗಿದೆ. ಗ್ರಂಥಾಲಯ ಪ್ರಾಧಿಕಾರದಲ್ಲಿ ಸದಸ್ಯರಾಗಿರುವ ಗ್ರಂಥಾಲಯ ಇಲಾಖೆಯ ಇಬ್ಬರು ಮಾಜಿ ನಿರ್ದೇಶಕರ ಹಿತಾ ಸಕ್ತಿಯ ಮೇರೆಗೆ ಇ–ಬುಕ್‌ ಯೋಜನೆಗೆ ಒಪ್ಪಿಗೆ ನೀಡಿ, ಟೆಂಡರ್‌ ಕೂಡ ನೀಡಲಾಗಿದೆ.

ADVERTISEMENT

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರುವ 5 ವಲಯ ಕಚೇರಿಗಳಿಗೆ ಆರ್ಥಿಕ ಇಲಾಖೆಯಿಂದ ಎಸ್‌.ಎಫ್‌.ಸಿ ಅನುದಾನದಲ್ಲಿ ಕಡಿತ ಮಾಡಿ ₹50 ಕೋಟಿ ಗ್ರಂಥಾಲಯ ಬಾಕಿ ಕರ ಬಿಡುಗಡೆ ಮಾಡಿದ್ದು, ಅದರಲ್ಲಿ 10 ಕೋಟಿಯನ್ನು ಇ–ಬುಕ್‌ ಮತ್ತು ಡಿಜಿಟಲೀಕರಣಕ್ಕೆ ಬಳಸಲು ನಿರ್ಧರಿಸಿದೆ.

ಪ್ರಕಾಶಕರ ವಲಯದ ಆತಂಕ: ವಿವಿಧ ಪ್ರಕಾಶನ ಸಂಸ್ಥೆಗಳ ಮುಖ್ಯಸ್ಥರು ಈ ತೀರ್ಮಾನದ ಬಗ್ಗೆ ಆಕ್ಷೇಪ ಎತ್ತಿದ್ದು, ಡಿಜಿಟಲೀಕರಣ ಮತ್ತು ಇ–ಬುಕ್‌ ವ್ಯವಸ್ಥೆಯಿಂದ ಕನ್ನಡ ಪುಸ್ತ ಕೋದ್ಯಮಕ್ಕೇ ಹೊಡೆತ ಬೀಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಕನ್ನಡದಲ್ಲಿ ಇ–ಬುಕ್‌ ರೂಪಿಸುವ ತಂತ್ರಜ್ಞಾನ ಇನ್ನೂ ಶೈಶವಾವಸ್ಥೆಯಲ್ಲೇ ಇದೆ. ಹಲವು ಪ್ರಕಾಶನದವರು ಇ–ಬುಕ್‌ ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಕನ್ನಡದ ಪ್ರಕಾಶಕರು ಹೊಸ ವ್ಯವಸ್ಥೆಗೆ ತಯಾರಾಗಿಲ್ಲ’ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಕಂಬತ್ತಳ್ಳಿ ಹೇಳಿದರು.

‘ಡೈಲಿ ಹಂಟ್‌ ಜತೆ ಸೇರಿ 500 ಶೀರ್ಷಿಕೆಗಳ ಪುಸ್ತಕಗಳನ್ನು ಇ–ಬುಕ್‌ ಮಾಡಿದೆವು. 4 ವರ್ಷಗಳಲ್ಲಿ 10 ರಿಂದ 20 ಇ–ಪುಸ್ತಕಗಳೂ ಮಾರಾ ಟ ವಾಗಿಲ್ಲ. ಕನ್ನಡದಲ್ಲಿ ಇನ್ನೂ ಇ–ಬುಕ್‌ ವ್ಯವಸ್ಥೆ ವಿಕಾಸಗೊಂಡಿಲ್ಲ. ಯುವ ಪೀಳಿಗೆಯವರು ಇಂಗ್ಲಿಷ್‌ನ ಇ–ಬುಕ್‌ ಗಳನ್ನು ಓದುತ್ತಾರೆಯೇ ಹೊರತು ಕನ್ನಡ ಇ–ಪುಸ್ತಕ ಓದುತ್ತಿಲ್ಲ’ ಎಂದು ‘ನವಕರ್ನಾಟಕ’ ಪ್ರಕಾಶನದ ರಮೇಶ್‌ ಉಡುಪ ಹೇಳಿದರು.

‘ಕೃತಿ ಸ್ವಾಮ್ಯ, ಲೇಖಕರಿಗೆ ಗೌರವ ಧನ, ಪ್ರಕಾಶಕರಿಗೆ ಸಂದಾಯ ಮಾಡ ಬೇಕಾದ ಮೊತ್ತದ ಚರ್ಚೆ ಆಗಿಲ್ಲ. ಪ್ರಕಾ ಶಕರು ಮತ್ತು ಲೇಖಕರನ್ನು ಕತ್ತಲಿನಲ್ಲಿಟ್ಟು ನಿರ್ಧಾರ ತೆಗೆದುಕೊಳ್ಳಲಾ ಗಿದೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ಲೇಖಕರು ಮತ್ತು ಪ್ರಕಾಶಕರ ಜತೆ ಚರ್ಚಿಸಬೇಕಿತ್ತು’ ಎಂದು ಅಭಿನವ ಪ್ರಕಾಶನದ ನ.ರವಿಕುಮಾರ್‌ ತಿಳಿಸಿದರು.

ಪ್ರಕಾಶಕರ ಹಿತ ಕಾಪಾಡುತ್ತೇವೆ: ‘ಡಿಜಿಟಲೀಕರಣ ಅನಿವಾರ್ಯ. ಇಂದಲ್ಲ, ನಾಳೆ ಆ ವ್ಯವಸ್ಥೆಗೆ ತೆರೆದುಕೊಳ್ಳಲೇಬೇಕು. ಎಲ್ಲ ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವುದಿಲ್ಲ. ಕೆಲವು ಕಡೆಗಳಲ್ಲಿ ಪುಸ್ತಕ ಇಡುವುದೂ ಸಮಸ್ಯೆ ಆಗುತ್ತಿದೆ. ಕಣಜ, ಕುವೆಂಪು ಭಾಷಾ ಭಾರತಿ, ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ... ಹೀಗೆ ಹಲವು ಇಲಾಖೆಗಳ ಸಮನ್ವಯದೊಂದಿಗೆ ಡಿಜಿಟಲೀಕರಣ ಮಾಡುವುದು ನಮ್ಮ ಉದ್ದೇಶ. ಲೇಖಕರು, ಪ್ರಕಾಶಕರ ಹಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ಈ ಕಾರ್ಯ ಅನುಷ್ಠಾನಗೊಳ್ಳುತ್ತದೆ’ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಪ್ರತಿಕ್ರಿಯಿಸಿದರು.

ಮುಂದಿನ ಕ್ರಮ

* ಬೀದಿಗಿಳಿದು ಹೋರಾಟ ನಡೆಸಲು ಪ್ರಕಾಶಕರ ಚಿಂತನೆ

* ಪಾರದರ್ಶಕ ನಿಯಮ ಅನುಸರಿಸದೇ ಟೆಂಡರ್‌

* ಕನ್ನಡ ಇ–ಬುಕ್‌ ಓದುಗರ ಪ್ರಮಾಣದ ಸಮೀಕ್ಷೆಗೆ ಒತ್ತಾಯ

‘ಇ–ಬುಕ್‌ಗೆ ಪ್ರತಿಕ್ರಿಯೆ ಕಡಿಮೆ’

‘ಇಜ್ಞಾನ ಟ್ರಸ್ಟ್‌ ತನ್ನ ಇತ್ತೀಚಿನ ಪ್ರಕಟಣೆಯಾದ ‘ಟೆಕ್‌ ಲೋಕದ ಹತ್ತು ಹೊಸ ಮುಖಗಳು’ ಪುಸ್ತಕವನ್ನು ಪ್ರಾಯೋಗಿಕವಾಗಿ ಗೂಗಲ್‌ ಪ್ಲೇಬುಕ್ಸ್‌ನಲ್ಲಿ ಪ್ರಕಟಿಸಿತ್ತು. ಮೂರು ತಿಂಗಳಾದರೂ ಕನ್ನಡಿಗ ಓದುಗರಿಂದ ಪ್ರತಿಕ್ರಿಯೆಯೇ ಬರಲಿಲ್ಲ. ಆದರೆ, ಮುದ್ರಿತ ಪ್ರತಿಗಳಿಗೆ ಉತ್ತಮ ಬೇಡಿಕೆ ಇದೆ’ ಎನ್ನುತ್ತಾರೆ ಇಜ್ಞಾನ ಟ್ರಸ್ಟ್‌ನ ಕಾರ್ಯದರ್ಶಿ ಮತ್ತು ಲೇಖಕ ಟಿ.ಜಿ.ಶ್ರೀನಿಧಿ.

ಮುದ್ರಿತ ಪುಸ್ತಕ ಖರೀದಿಗೆ ಶೇ 15 ಅನುದಾನ

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಅನ್ವಯ ಗ್ರಂಥಗಳಿಗೆ ಮೀಸಲಾದ ಒಟ್ಟು ಬಜೆಟ್‌ನಲ್ಲಿ ಇ–ಬುಕ್‌ಗಳ ತಯಾರಿಕೆಗಾಗಿ ಶೇ 35, ಮುದ್ರಿತ ಪುಸ್ತಕಗಳಿಗಾಗಿ ಶೇ 15 ಅನುದಾನ ನೀಡಲಾಗುವುದು.

ಉಳಿದ ಶೇ 50ರಷ್ಟು ಹಣವನ್ನು ಪೀಠೋಪಕರಣ ಖರೀದಿ, ನಿರ್ವಹಣೆ ಮತ್ತು ಇತರ ಉದ್ದೇಶಗಳಿಗೆ ಮೀಸಲಿಡಲಾಗಿದೆ. ಹಿಂದಿನ ಸಾಲಿನಲ್ಲಿ ಮುದ್ರಿತ ಪುಸ್ತಕಗಳ ಖರೀದಿಗೆ ಶೇ 60ರಷ್ಟು ಹಣ ನೀಡಲಾಗುತ್ತಿತ್ತು. ಅದನ್ನು ಈಗ ಶೇ 15ಕ್ಕೆ ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

***

ಮುದ್ರಿತ ಪುಸ್ತಕಗಳಿಗೆ ಹೆಚ್ಚಿನ ಹಣ ನಿಗದಿ ಮಾಡಬೇಕು. ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶಕರು, ಲೇಖಕರು ಮತ್ತು ತಂತ್ರಜ್ಞರ ಸಭೆ ಕರೆಯಬೇಕು

-ಸೃಷ್ಟಿ ನಾಗೇಶ್‌, ಪ್ರಕಾಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.