ADVERTISEMENT

ಗಿಫ್ಟ್‌ ಸೆಂಟರ್‌ನಲ್ಲಿ ಇ–ಸಿಗರೇಟ್‌ ಮಾರಾಟ

₹26 ಲಕ್ಷ ಮೌಲ್ಯದ ಇ–ಸಿಗರೇಟ್‌ ಉತ್ಪನ್ನ, ವಿದೇಶಿ ಸಿಗರೇಟ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 0:30 IST
Last Updated 14 ಡಿಸೆಂಬರ್ 2023, 0:30 IST
ಪೊಲೀಸರು ಜಪ್ತಿ ಮಾಡಿಕೊಂಡಿರುವ ಇ–ಸಿಗರೇಟ್‌.
ಪೊಲೀಸರು ಜಪ್ತಿ ಮಾಡಿಕೊಂಡಿರುವ ಇ–ಸಿಗರೇಟ್‌.   

ಬೆಂಗಳೂರು: ನಗರದ ವಿವಿಧೆಡೆ ದಾಳಿ ನಡೆಸಿದ ಸಿಸಿಬಿ ಹಾಗೂ ಕೊತ್ತನೂರು ಠಾಣೆ ಪೊಲೀಸರು ಅಪಾರ ಪ್ರಮಾಣದ ಇ –ಸಿಗರೇಟ್ ಉತ್ಪನ್ನ ಹಾಗೂ ವಿದೇಶಿ ಸಿಗರೇಟ್‌  ಜಪ್ತಿ ಮಾಡಿಕೊಂಡಿದ್ದಾರೆ.

ನಿಷೇಧಿತ ಇ–ಸಿಗರೇಟ್‌ ಮಾರಾಟ ಮಾಡುತ್ತಿದ್ದ ಗಿಫ್ಟ್‌ ಸೆಂಟರ್‌ಗಳ ಮೇಲೆ ಕೊತ್ತನೂರು ಠಾಣೆ ಪೊಲೀಸರು ದಾಳಿ ನಡೆಸಿ, ಇ–ಸಿಗರೇಟ್‌ ಮಾರಾಟ ನಡೆಸುತ್ತಿದ್ದ ಮುಜಾಮಿಲ್‌, ಮೊಹಮ್ಮದ್‌ ಅಮ್ಜದ್‌, ಅಬ್ದುಲ್‌ ಸಮೀರ್‌, ಅಬ್ದುಲ್‌ ಅಜೀಜ್‌ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಕೋಟ್ಪಾ ಹಾಗೂ ಇ–ಸಿಗರೇಟ್‌ ನಿಷೇಧ ಕಾಯ್ದೆಯಡಿಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಗಿಫ್ಟ್‌ ಸೆಂಟರ್‌ನಲ್ಲಿ ದಾಸ್ತಾನು ಮಾಡಿಕೊಂಡಿದ್ದ ₹2.30 ಲಕ್ಷ ಮೌಲ್ಯದ ಇ–ಸಿಗರೇಟ್‌ ಹಾಗೂ ಪೂರೈಕೆದಾರನಿಂದ ₹23.67 ಲಕ್ಷ ಮೌಲ್ಯದ ಇ–ಸಿಗರೇಟ್‌ ಉತ್ಪನ್ನ ಹಾಗೂ ವಿದೇಶಿ ಸಿಗರೇಟ್‌ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಸಿಸಿಬಿ ದಾಳಿ: ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಜೆ.ಪಿ. ನಗರದ 7ನೇ ಹಂತದ ಭುವನೇಶ್ವರಿ ನಗರ ಶಾಪ್‌ ನಂ.:513 ಹಾಗೂ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಇಂದ್ರಪ್ರಸ್ಥ ಕಟ್ಟಡದಲ್ಲಿ ಇ–ಸಿಗರೇಟ್‌ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ₹4.4 ಲಕ್ಷ ಮೌಲ್ಯದ ವಿದೇಶಿ ಸಿಗರೇಟ್‌ ಜಪ್ತಿ ಮಾಡಿಕೊಂಡಿದ್ಧಾರೆ.

ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮೂರು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಕ್ಲಬ್‌ಗಳ ಮೇಲೆ ಸಿಸಿಬಿ ದಾಳಿ

ಜೂಜಾಟ ನಡೆಯುತ್ತಿದ್ದ ನಗರದ ಕ್ಲಬ್‌ಗಳ ಮೇಲೆ ಸಿಸಿಬಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಕೋಣನಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ‘ಕೋಣನಕುಂಟೆ ಕಲ್ಚರಲ್‌ ಅಸೋಸಿಯೇಷನ್‌ ಕ್ಲಬ್‌’ ಮೇಲೆ ದಾಳಿ ನಡೆಸಿ 26 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ₹1 ಲಕ್ಷ ನಗದು ಜಪ್ತಿ ಮಾಡಿಕೊಂಡಿದ್ದಾರೆ. ಪುಲಕೇಶಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ‘ಯಂಗ್‌ ಮ್ಯಾನ್‌ ಇಂಡಿಯನ್‌ ಅಸೋಸಿಯೇಷನ್‌’ ಆವರಣದಲ್ಲಿರುವ ಇಂಡಿಯನ್‌ ಪೋಕರ್‌ ಅಸೋಸಿಯೇಷನ್‌ ಮೇಲೆ ದಾಳಿ ನಡೆಸಿ 46 ಆರೋಪಿಗಳನ್ನು ಬಂಧಿಸಿ ₹2.29 ಲಕ್ಷ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಗೃಹಬಳಕೆ ಸಿಲಿಂಡರ್ ರೀಫಿಲ್ಲಿಂಗ್ ದಂಧೆ

ಗೃಹ ಬಳಕೆ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಂಡು ಸಣ್ಣ ಸಣ್ಣ ಸಿಲಿಂಡರ್‌ಗಳಿಗೆ ಅಕ್ರಮವಾಗಿ ರೀಫಿಲ್ಲಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಶರಬೀಶ್‌ ಎಂಟರ್‌ ಪ್ರೈಸಸ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ದಂಧೆ ಪತ್ತೆಹಚ್ಚಿದ್ದಾರೆ. ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ. ಅಂಗಡಿಯಿಂದ ₹14 ಲಕ್ಷ ಮೌಲ್ಯದ ವಿವಿಧ ಕಂಪನಿಯ 135 ಸಿಲಿಂಡರ್‌ ಎರಡು ರೀಫಿಲ್ಲಿಂಗ್‌ ಉಪಕರಣಗಳು ಒಂದು ತೂಕದ ಯಂತ್ರ ಹಾಗೂ ಒಂದು ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ‘ಈ ಮಳಿಗೆ ಯಾವುದೇ ಪರವಾನಗಿ ಪಡೆದಿಕೊಂಡಿಲ್ಲ. ಲಿಯೊ ಎಂವಿಆರ್‌ ಜ್ಯೋತಿ ಅಗ್ನಿ ಸೂರ್ಯ ಗ್ಯಾಸ್‌ ಕಂಪನಿ ಸೇರಿದ ಸಿಲಿಂಡರ್‌ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡು ರೀಫಿಲ್ಲಿಂಗ್‌ ಉಪಕರಣ ಬಳಸಿ ಸಣ್ಣ ಸಣ್ಣ ಸಿಲಿಂಡರ್‌ಗಳಿಗೆ ಅನಿಲ ತುಂಬಲಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.