ADVERTISEMENT

ಬೆಂಗಳೂರು: ಆಸ್ತಿ ನೋಂದಣಿಗೆ ಎರಡು ದಿನದಲ್ಲಿ ಇ–ಖಾತಾ

ದಾಖಲೆಗಳನ್ನು ಸಲ್ಲಿಸಿದರೆ ಶೀಘ್ರ ಪ್ರಕ್ರಿಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 22:29 IST
Last Updated 18 ಅಕ್ಟೋಬರ್ 2024, 22:29 IST
   

ಬೆಂಗಳೂರು: ಆಸ್ತಿ ನೋಂದಣಿಗಾಗಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ಟೋಬರ್‌ನಲ್ಲಿ ದಿನ ನಿಗದಿಪಡಿಸಿಕೊಂಡವರಿಗಾಗಿ, ಒಂದು ಅಥವಾ ಎರಡು ದಿನದಲ್ಲಿ ಇ–ಖಾತಾ ನೀಡಲು ಬಿಬಿಎಂಪಿ ಅವಕಾಶ ಕಲ್ಪಿಸಿದೆ.

ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿದರೆ ಕೂಡಲೇ ಇ–ಖಾತಾ ಮಾಡಿಕೊಡಲು ಎಲ್ಲ ಸಹಾಯಕ ಕಂದಾಯ ಅಧಿಕಾರಿಯವರಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಬಿಬಿಎಂಪಿಯಿಂದ ಅಂತಿಮ ಇ-ಖಾತಾವನ್ನು ಪಡೆಯಲು ಈ ಕೆಳಗಿನ ವಿಧಾನ ಅನುಸರಿಸಲು ಅವರು ತಿಳಿಸಿದ್ದಾರೆ.

ADVERTISEMENT

ಆನ್‌ಲೈನ್‌ https://BBMPeAasthi.karnataka.gov.inನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ಕರಡು ಇ-ಖಾತಾ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಸ್ವತ್ತಿನ ಆಸ್ತಿ ತೆರಿಗೆ ರಸೀದಿಯಿಂದ ವಾರ್ಡ್ ಹೆಸರು ಮತ್ತು ಸಂಖ್ಯೆ ತಿಳಿದುಕೊಳ್ಳಬಹುದು.

ಕೆಳಗಿನ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಿ/ ಅಪ್‌ಲೋಡ್ ಮಾಡಬೇಕು

* ಸ್ವತ್ತಿನ ಆಸ್ತಿ ತೆರಿಗೆ ಅರ್ಜಿ ಸಂಖ್ಯೆ (10 ಅಂಕಿ)

* ಮಾಲೀಕರ ಆಧಾರ್ ಆಧಾರಿತ ಇಕೆವೈಸಿ ಅಪ್‌ಡೇಟ್‌ ಮಾಡಬೇಕು. ಮಾಲೀಕರು ಆಧಾರ್ ಹೊಂದಿಲ್ಲದಿದ್ದರೆ, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಪಾಸ್‌ಪೋರ್ಟ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ದೃಢೀಕರಿಸಬಹುದು.

* ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ/ದಾನ ಪತ್ರ ಇತ್ಯಾದಿ) ನಮೂದಿಸಬೇಕು (ಕಾವೇರಿ ತಂತ್ರಾಂಶದಿಂದ ನೋಂದಾಯಿತ ಪತ್ರ ಮಾಹಿತಿಯನ್ನು ಪಡೆಯಲಾಗುವುದು)

* ಆಸ್ತಿಯ ಹಕ್ಕು ನಿರೂಪಿಸಲು, ನೋಂದಣಿ ದಿನಾಂಕದ ಒಂದು ದಿನದ ಹಿಂದಿನಿಂದ 2024ರ ಅಕ್ಟೋಬರ್‌ 18ರವರೆಗೆ ಆಸ್ತಿಯ ಋಣಭಾರ ಪ್ರಮಾಣಪತ್ರ (ಇ.ಸಿ) ಸಲ್ಲಿಸಬೇಕು

* ಮಾಲೀಕರು ಆಸ್ತಿಯ ಮುಂದೆ ನಿಂತಿರುವ ಛಾಯಾಚಿತ್ರ ಅಪ್‌ಲೋಡ್‌ ಮಾಡಬೇಕು

* ಬೆಸ್ಕಾಂನ 10 ಅಂಕಿಯ ಖಾತಾ ಸಂಖ್ಯೆ (ಖಾಲಿ ಸ್ವತ್ತಿಗೆ ಕಡ್ಡಾಯವಲ್ಲ)

* ಜಲಮಂಡಳಿ ಸಂಪರ್ಕ ಸಂಖ್ಯೆ (ಐಚ್ಛಿಕ)

ಮೇಲಿನ ಮಾಹಿತಿ ಹಾಗೂ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿ, ಸಲ್ಲಿಸಿದ ನಂತರ ಎಲ್ಲವೂ ಕ್ರಮಬದ್ಧವಾಗಿದ್ದರೆ ಒಂದೇ ದಿನದಲ್ಲಿ ಅಂತಿಮ ಇ–ಖಾತಾ ಪಡೆಯಲು ಸಂಬಂಧಿಸಿದ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯನ್ನು ಭೇಟಿ ಮಾಡಬೇಕು ಎಂದು ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಮೇಲಿನ ವಿಧಾನವನ್ನು ಪೂರ್ಣಗೊಳಿಸಲು ಸಮಸ್ಯೆಗಳಿದ್ದರೆ, ತುರ್ತಾಗಿ ನೋಂದಣಿಯನ್ನು ಹೊಂದಿದ್ದರೆ ಎಲ್ಲಾ ದಾಖಲೆಗಳು ಮತ್ತು ಅ.18ರವರೆಗಿನ ಋಣಭಾರ ಪ್ರಮಾಣಪತ್ರದೊಂದಿಗೆ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಸಿಬ್ಬಂದಿ ಸಹಾಯದಿಂದ ಅಪ್‌ಲೋಡ್‌ ಮಾಡಹುದು. ಅವರು ನಿಯಮಗಳ ಪ್ರಕಾರ ಅಂತಿಮ ಇ-ಖಾತಾವನ್ನು ಒಂದು ದಿನದಲ್ಲಿ ಪಡೆಯಲು ಸಹಾಯ ಮಾಡುತ್ತಾರೆ.

ಉಪ-ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಯನ್ನು ತುರ್ತಾಗಿ ಹೊಂದಿರದ ಆಸ್ತಿ ಮಾಲೀಕರು, ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಇ–ಖಾತಾಗಾಗಿ ಭೇಟಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಪ್ರಶ್ನೆಗಳು ಅಥವಾ ಸಮಸ್ಯೆಗಳಿಗಾಗಿ ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡಬಹುದು ಅಥವಾ BBMPeKhata@gmail.comಗೆ ಇಮೇಲ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಪಾಲಿಕೆ ಸಿಬ್ಬಂದಿಗೆ ಕಾರ್ಯಾಗಾರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇ–ಖಾತಾ ಪಡೆಯಲು ಬರುವ ಆಸ್ತಿ ಮಾಲೀಕರಿಗೆ ಸರಿಯಾಗಿ ಸ್ಪಂದಿಸಬೇಕು ಎಂದು ಕಂದಾಯ ವಿಭಾಗದ ಜಂಟಿ ಆಯುಕ್ತ ಲಕ್ಷ್ಮೀದೇವಿ ಸೂಚಿಸಿದರು.

ಇ-ಆಸ್ತಿ ವ್ಯವಸ್ಥೆಯಲ್ಲಿ ಇ–ಖಾತಾವನ್ನು ತ್ವರಿತ ಹಾಗೂ ಸುಗಮವಾಗಿ ವಿತರಿಸಲು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿ ಮತ್ತು ನೌಕರರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ತುರ್ತಾಗಿ ಆಸ್ತಿ ನೋಂದಣಿ ಮಾಡಿಸುವವರಿಗೆ ಹಾಗೂ ಅನಿವಾಸಿ ಭಾರತೀಯರಿಗೆ ಯಾವುದೇ ತೊಂದರೆ ಆಗದಂತೆ ಶೀಘ್ರವಾಗಿ ಇ-ಖಾತಾ ವಿತರಿಸುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಯ ‘ಹೆಲ್ಪ್ ಡೆಸ್ಕ್‌’ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಅಧಿಕಾರಿಗಳು ನೆರವಾಗಬೇಕು ಎಂದು ಹೇಳಿದರು.

ಇ-ಖಾತಾ ವ್ಯವಸ್ಥೆಯನ್ನು ಸುಗಮ ಮುಂದುವರಿಸಲು ತರಬೇತಿ ನೀಡಲಾದ ಕಾರ್ಯಾಗಾರದಲ್ಲಿ ಪಾಲಿಕೆಯ ಎಂಟೂ ವಲಯಗಳ ಕಂದಾಯ ವಿಭಾಗದ ಉಪ ಆಯುಕ್ತರು, ಸಹಾಯಕ ಕಂದಾಯ ಅಧಿಕಾರಿಗಳು, ವಿಷಯ ನಿರ್ವಾಹಕರು, ಎನ್‌ಐಸಿ ಅಧಿಕಾರಿಗಳು ಸೇರಿದಂತೆ 350ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.