ADVERTISEMENT

ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ–ಖಾತಾ: ‘ಫೇಸ್‌ಲೆಸ್ ವ್ಯವಸ್ಥೆ’ ಜಾರಿ

ಬಿಬಿಎಂಪಿಯಿಂದ 21 ಲಕ್ಷ ಖಾತಾ ಡಿಜಿಟಲೀಕರಣ; ಮಾಲೀಕರಿಗೆ ಎಸ್‌ಎಂಎಸ್‌

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 23:30 IST
Last Updated 19 ಸೆಪ್ಟೆಂಬರ್ 2024, 23:30 IST
ಖಾತಾ
ಖಾತಾ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳಿಗೆ ಇ–ಖಾತಾ ನೀಡಲು ‘ಫೇಸ್‌ಲೆಸ್‌, ಸಂಪರ್ಕರಹಿತ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ’ ಜಾರಿ ಮಾಡಲಾಗಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿರ್ದೇಶನದಲ್ಲಿ ‘ಬಿಬಿಎಂಪಿಯು ಫೇಸ್‌ಲೆಸ್‌, ಸಂಪರ್ಕರಹಿತ ವ್ಯವಸ್ಥೆ’ ಪ್ರಾರಂಭಿಸುತ್ತಿದೆ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಬಿಬಿಎಂಪಿಯ ರಿಜಿಸ್ಟರ್‌ಗಳಲ್ಲಿರುವ ಎಲ್ಲ 21 ಲಕ್ಷ ಖಾತಾಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇದರ ಮುಂದಿನ ಭಾಗವಾಗಿ, ಜಿಪಿಎಸ್‌ನಲ್ಲಿ ಆಸ್ತಿಯ ಅಕ್ಷಾಂಶ, ರೇಖಾಂಶವನ್ನು ಸೆರೆಹಿಡಿಯಲು ಬಿಬಿಎಂಪಿ ಸಿಬ್ಬಂದಿ ಆಸ್ತಿ–ಕಟ್ಟಡಗಳಿಗೆ ಭೇಟಿ ನೀಡಲಿದ್ದಾರೆ. ಇ–ಖಾತಾ ನೀಡಲು ಆಸ್ತಿಯ ಜಿಪಿಎಸ್‌ ವಿವರಗಳು ಹಾಗೂ ಚಿತ್ರ ಕಡ್ಡಾಯವಾಗಿರುತ್ತದೆ ಎಂದು ಹೇಳಿದ್ದಾರೆ.

ADVERTISEMENT

‘ಆಸ್ತಿಯ ಜಿಪಿಎಸ್‌ ಮಾಹಿತಿ ವಿಶಿಷ್ಟ ಗುರುತಾಗಿದೆ. ಇ–ಖಾತಾದ ಎಲ್ಲ ಸೇವೆಗಳು ‘ಫೇಸ್‌ಲೆಸ್‌, ಸಂಪರ್ಕರಹಿತ ಮತ್ತು ಆನ್‌ಲೈನ್‌ ವಿತರಣೆಯ ಸೌಲಭ್ಯ ಹೊಂದಿರುತ್ತವೆ. ಆದ್ದರಿಂದ, ನಗರದ ಆಸ್ತಿಗಳ ಮಾಲೀಕರು ಬಿಬಿಎಂಪಿ ಸಿಬ್ಬಂದಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು’ ಎಂದು ತುಷಾರ್‌ ಗಿರಿನಾಥ್‌ ಮನವಿ ಮಾಡಿದ್ದಾರೆ.

ಆಸ್ತಿ ಮಾಲೀಕರಿಗೆ ಎಸ್‌ಎಂಎಸ್‌: ಇ–ಖಾತಾಗೆ ಜಿಪಿಎಸ್ ಮಾಹಿತಿ ಅಳವಡಿಸಬೇಕಿರುವುದರಿಂದ ಬಿಬಿಎಂಪಿ ವತಿಯಿಂದ ಆಸ್ತಿಗಳ ಮಾಲೀಕರಿಗೆ ಗುರುವಾರದಿಂದ ಎಸ್‌ಎಂಎಸ್‌ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಆಸ್ತಿಗೂ ಇ–ಖಾತಾವನ್ನು ಸೃಷ್ಟಿ ಮಾಡಲಾಗುತ್ತಿದೆ. ಇದಕ್ಕಾಗಿ ಆಸ್ತಿಯ ಜಿಪಿಎಸ್ ದತ್ತಾಂಶ ಕಡ್ಡಾಯವಾಗಿವೆ. ನಿಮ್ಮ ಆಸ್ತಿಯ ಜಿಪಿಎಸ್‌ ದತ್ತಾಂಶ ಸೆರೆಹಿಡಿಯಲು ಬಿಬಿಎಂಪಿ ಸಿಬ್ಬಂದಿ ಕೆಲವೇ ದಿನಗಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತಾರೆ. ಆಸ್ತಿ ತೆರಿಗೆ ರಸೀದಿಯ ನಕಲು ಪ್ರತಿಯನ್ನು ಸಿದ್ಧವಾಗಿರಿಸಿಕೊಳ್ಳಿ. ಬಿಬಿಎಂಪಿಯ ಸಿಬ್ಬಂದಿಯೊಂದಿಗೆ ಸಹಕರಿಸಿ, ನಿಮ್ಮ ಆಸ್ತಿಗೆ ಜಿಪಿಎಸ್‌ ಅನ್ನು ಸರಿಯಾಗಿ ಟ್ಯಾಗ್‌ ಮಾಡಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಆಸ್ತಿಯ ಜಿಪಿಎಸ್‌ ‘ಆಸ್ತಿಯ ಭೂ–ಆಧಾರ್‌’ ಆಗಿರುತ್ತದೆ. ಅದರಂತೆ ಬಳಸಲಾಗುತ್ತದೆ’ ಎಂದು ಎಸ್‌ಎಂಎಸ್‌ನಲ್ಲಿ ಮಾಹಿತಿ ನೀಡಲಾಗಿದೆ.

‘ಎ–ಖಾತಾ ಅಥವಾ ಬಿ–ಖಾತಾ ಹೊಂದಿರುವ ಕಟ್ಟಡಗಳು ಹಾಗೂ ನಿವೇಶನಗಳ ಮಾಲೀಕರಿಗೂ ಇ–ಖಾತಾ ನೀಡಲಾಗುತ್ತದೆ’ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.