ADVERTISEMENT

ಪತ್ರಿಕಾ ವಿತರಕರ ವಿಮಾ ನೋಂದಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 21:05 IST
Last Updated 11 ಜನವರಿ 2024, 21:05 IST
ಯಶವಂತಪುರದ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರು ನೋಂದಣಿ ಮಾಡಿಸಿದರು.
ಯಶವಂತಪುರದ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರು ನೋಂದಣಿ ಮಾಡಿಸಿದರು.   

ಬೆಂಗಳೂರು: ’ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಜೀವವಿಮಾ ಯೋಜನೆಯನ್ನು ಜಾರಿಗೊಳಿಸಿದೆ’ ಎಂದು ಕಾರ್ಮಿಕ ಇಲಾಖೆ (ವಿಭಾಗ-1) ಸಹಾಯಕ ಕಾರ್ಮಿಕಾಧಿಕಾರಿ ಎಂ.ಎನ್.ದೇವರಾಜು ತಿಳಿಸಿದ್ದಾರೆ.

ಯಶವಂತಪುರ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಗುರುವಾರ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ಗಿಗ್ ಕಾರ್ಮಿಕರ ವಿಮಾ ಯೋಜನೆ ನೋಂದಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇ–ಶ್ರಮ್‌’ ಪೋರ್ಟ್‌ಲ್‌ನಲ್ಲಿ ಎಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ನಿರಂತರವಾಗಿ ಇರಲಿದೆ’ ಎಂದು ಅವರು ತಿಳಿಸಿದರು.

ADVERTISEMENT

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ಈ ವಿಮಾ ಯೋಜನೆಯು ಎಲ್ಲರಿಗೂ ತಲುಪುವಂತಾಗಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಕೆ. ಮಾತನಾಡಿ,‘ಯೋಜನೆಯಲ್ಲಿರುವ ಷರತ್ತುಗಳಲ್ಲಿ ವಯೋಮಿತಿಯನ್ನು ಗರಿಷ್ಠ 60 ವರ್ಷದಿಂದ 70 ವರ್ಷಗಳಿಗೆ ವಿಸ್ತರಿಸಬೇಕು. ಆಗ ಎಲ್ಲರಿಗೂ ಈ ಸೌಲಭ್ಯ ಸಿಗುತ್ತದೆ. ಇಲ್ಲದಿದ್ದರೆ ಅನೇಕ ಪತ್ರಿಕಾ ವಿತರಕರು ಯೋಜನೆಯಿಂದ ವಂಚಿತರಾಗಲಿದ್ದಾರೆ’ ಎಂದು ಹೇಳಿದರು.

’ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಕಾರ್ಮಿಕಾಧಿಕಾರಿಗಳು ಭರವಸೆ ನೀಡಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಶಿವಾನಂದ, ಶಿವಕುಮಾರ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಬಾಲಾಜಿ, ಸುಧೀಂದ್ರ, ಹೊನ್ನಪ್ಪ ಮತ್ತಿತರರು ಹಾಜರಿದ್ದರು.

ಒಂದೇ ದಿನ ಸುಮಾರು 300ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡರು. ಇವತ್ತೂ (ಶುಕ್ರವಾರ) ನೋಂದಣಿ ಕಾರ್ಯ ಮುಂದುವರಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.